ನವದೆಹಲಿ: ಆರು ರಾಜ್ಯಗಳ ಏಳು ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 3ರಂದು ನಡೆದಿದ್ದ ಉಪ ಚುನಾವಣೆಯ ಫಲಿತಾಂಶ ಭಾನುವಾರ ಪ್ರಕಟವಾಗಿದ್ದು, ಉತ್ತರ ಪ್ರದೇಶ, ಬಿಹಾರ, ಹರಿಯಾಣ ಮತ್ತು ಒಡಿಶಾದಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ.
ಬಿಜೆಪಿ ಮತ್ತು ಇತರ ಪ್ರಾದೇಶಿಕ ಪಕ್ಷಗಳ ಜಿದ್ದಾಜಿದ್ದಿ ಪೈಪೋಟಿಗೆ ಸಾಕ್ಷಿಯಾಗಿದ್ದ 6 ರಾಜ್ಯಗಳ 7 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗಳ ಮತಎಣಿಕೆ ಇಂದು ಮುಕ್ತಾಯಗೊಂಡಿದೆ.
ಬಿಜೆಪಿ ಹರಿಯಾಣ, ಉತ್ತರ ಪ್ರದೇಶ, ಬಿಹಾರ ಮತ್ತು ಒಡಿಶಾದಲ್ಲಿ ನಾಲ್ಕು ಸ್ಥಾನಗಳನ್ನು ಗೆದ್ದಿದ್ದರೆ, ರಾಷ್ಟ್ರೀಯ ಜನತಾ ದಳ(ಆರ್ ಜೆಡಿ)ವು ಮೊಕಾಮಾ ವಿಧಾನಸಭಾ ಸ್ಥಾನವನ್ನು ಉಳಿಸಿಕೊಂಡಿದೆ.
ತೆಲಂಗಾಣದ ಮುನುಗೋಡೆ ಉಪಚುನಾವಣೆಯಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‌ಎಸ್) 10 ಸಾವಿರಕ್ಕೂ ಹೆಚ್ಚು ಮತಗಳಿಂದ ಜಯಗಳಿಸಿದೆ. ಬಿಜೆಪಿ ಅಭ್ಯರ್ಥಿ ಕೋಮಟಿರೆಡ್ಡಿ ರಾಜ್ ಗೋಪಾಲ್ ರೆಡ್ಡಿ ಅವರು ಟಿಆರ್‌ಎಸ್‌ನ ಕುಸುಕುಂಟ್ಲ ಪ್ರಭಾಕರ ರೆಡ್ಡಿ ಅವರಿಗೆ ತೀವ್ರ ಪೈಪೋಟಿ ನೀಡಿದ್ದರು.
ಮುಂಬೈನ ಅಂಧೇರಿ(ಪೂರ್ವ) ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಶಿವಸೇನೆಯ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಅಭ್ಯರ್ಥಿ ರುತುಜಾ ಲಟ್ಕೆ ಗೆಲುವು ಸಾಧಿಸಿದ್ದಾರೆ.
ಉತ್ತರ ಪ್ರದೇಶದ ಗೋಲ ಗೋಕರನಾಥ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅಮನ್ ಗಿರಿ ಅವರು ಸಮೀಪದ ಪ್ರತಿಸ್ಪರ್ಧಿ ಮತ್ತು ಸಮಾಜವಾದಿ ಪಕ್ಷದ ಅಭ್ಯರ್ಥಿಯನ್ನು 34,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದಾರೆ.
ಹರಿಯಾಣದ ಅದಂಪುರದಲ್ಲೂ ಬಿಜೆಪಿ ಅಭ್ಯರ್ಥಿ ಭವ್ಯಾ ಬಿಷ್ಣೋಯ್ ಅವರು ಪ್ರತಿಸ್ಪರ್ಧಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಜೈ ಪ್ರಕಾಶ್ ಅವರನ್ನು ಸುಮಾರು 16,000 ಮತಗಳ ಅಂತರದಿಂದ ಸೋಲಿಸಿದ್ದಾರೆ.
ಬಿಹಾರದಲ್ಲಿ ಆರ್‌ಜೆಡಿ ಅಭ್ಯರ್ಥಿ ನೀಲಮ್ ದೇವಿ ಅವರು ಮೊಕಾಮಾ ಕ್ಷೇತ್ರದಲ್ಲಿ 16,000 ಮತಗಳಿಂದ ಗೆಲುವು ಸಾಧಿಸಿದ್ದಾರೆ.