ನವದೆಹಲಿ:ಉದ್ಯಮಿ ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್, ಜರ್ಮನಿ ಮೂಲದ ಮೆಟ್ರೊ ಎಜಿ ಸಮೂಹದ ಭಾಗವಾಗಿರುವ ಮೆಟ್ರೊ ಕ್ಯಾಶ್ & ಕ್ಯಾರಿ ಹೋಲ್ ಸೇಲ್ ವಿತರಣೆ ಕೇಂದ್ರಗಳ (Metro Cash & Carry) ಜಾಲವನ್ನು 4,060 ಕೋಟಿ ರೂ.ಗಳ ಡೀಲ್‌ನಲ್ಲಿ ಖರೀದಿಸಿದೆ ಎಂದು ಮೂಲಗಳು ತಿಳಿಸಿವೆ.
ಈ ಡೀಲ್ ಪ್ರಕಾರ ಮೆಟ್ರೊ ಕ್ಯಾಶ್ & ಕ್ಯಾರಿಯ 31 ಸಗಟು ವಿತರಣೆ ಕೇಂದ್ರಗಳು, ಲ್ಯಾಂಡ್ ಬ್ಯಾಂಕ್‌ಗಳು ಮತ್ತು ಇತರ ಆಸ್ತಿಗಳು ರಿಲಯನ್ಸ್ ಇಂಡಸ್ಟ್ರೀಸ್ ಪಾಲಾಗಲಿದೆ. ಬಿ2ಬಿ ವಲಯದಲ್ಲಿ ರಿಲಯನ್ಸ್ ರಿಟೇಲ್‌ಗೆ ತನ್ನ ಪ್ರಾಬಲ್ಯ ವಿಸ್ತರಣೆಗೆ ಇದರಿಂದ ಸಹಾಯಕವಾಗಲಿದೆ. ರಿಟೇಲ್ ವಲಯದಲ್ಲಿ ಈಗಾಗಲೇ ರಿಲಯನ್ಸ್ ರಿಟೇಲ್ ತನ್ನ ಪ್ರಾಬಲ್ಯವನ್ನು ಹೊಂದಿದೆ.
ಕಳೆದ ಹಲವು ತಿಂಗಳುಗಳಿಂದ ರಿಲಯನ್ಸ್ ಇಂಡಸ್ಟ್ರೀಸ್ ಹಾಗೂ ಮೆಟ್ರೊ ಜತೆ ಮಾತುಕತೆ ನಡೆಯುತ್ತಿತ್ತು. ಕಳೆದ ವಾರ ಮೆಟ್ರೊ, ರಿಲಯನ್ಸ್ ರಿಟೇಲ್‌ನ ಆಫರ್ ಅನ್ನು ಅಂಗೀಕರಿಸಿದೆ ಎಂದು ಮೂಲಗಳು ತಿಳಿಸಿವೆ. ಉಭಯ ಕಂಪನಿಗಳು ಈ ಬಗ್ಗೆ ಅಧಿಕೃತವಾಗಿ ಹೇಳಿಕೆ ನೀಡಿಲ್ಲ.
ಕಿರಾಣಾ ಅಂಗಡಿಗಳ ಮಾಲೀಕರು, ರಿಟೇಲರ್ಸ್, ರೆಸ್ಟೊರೆಂಟ್‌ಗಳು ಮೆಟ್ರೊ ಕ್ಯಾಶ್ & ಕ್ಯಾರಿಯ ಗ್ರಾಹಕರಾಗಿದ್ದಾರೆ. ಮೆಟ್ರೊ ಕ್ಯಾಶ್ & ಕ್ಯಾರಿಯು ಬೆಂಗಳೂರಿನಲ್ಲಿ 6, ಹೈದರಾಬಾದ್‌ನಲ್ಲಿ 4, ಮುಂಬಯಿ ಮತ್ತು ದಿಲ್ಲಿಯಲ್ಲಿ ತಲಾ ಎರಡು ಮಳಿಗೆಗಳನ್ನು ಹೊಂದಿದೆ. ಕೋಲ್ಕತಾ, ಜೈಪುರ, ಜಲಂಧರ, ಅಮೃತಸರ, ಅಹಮದಾಬಾದ್, ಸೂರತ್, ಇಂದೋರ್, ಲಖನೌ, ಮೀರತ್, ನಾಸಿಕ್, ಗಾಜಿಯಾಬಾದ್, ತುಮಕೂರು, ವಿಜಯವಾಡಾ, ವಿಶಾಪಟ್ಟಣಂ, ಗುಂಟೂರು, ಹುಬ್ಬಳ್ಳಿಯಲ್ಲಿ ತಲಾ ಒಂದು ಕೇಂದ್ರವನ್ನು ಹೊಂದಿದೆ.