ಪತ್ತನಂತಿಟ್ಟ: ಕೇರಳದಲ್ಲಿ ಶಬರಿಮಲೆ ಯಾತ್ರಿಕರನ್ನು ಹೊತ್ತೊಯ್ಯುತ್ತಿದ್ದ ಆಂಧ್ರಪ್ರದೇಶದ ಬಸ್ ಪಲ್ಟಿಯಾಗಿ 43 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಕೇರಳದ ಪತ್ತನಂತಿಟ್ಟ ಜಿಲ್ಲೆಯ ಲಾಹಾದಲ್ಲಿ ಘಟನೆ ನಡೆದಿದೆ. ಈ ಪೈಕಿ ಎಂಟು ವರ್ಷದ ಬಾಲಕ ಮಣಿಕಂಠನ ಪರಿಸ್ಥಿತಿ ಚಿಂತಾಜನಕವಾಗಿದೆ.
ತೀರ್ಥ ಯಾತ್ರಿಕರು ಶಬರಿಮಲೆ ಅಯ್ಯಪ್ಪನ ದರ್ಶನ ಮುಗಿಸಿ ಹಿಂದಿರುಗುತ್ತಿದ್ದರು. ಈ ವೇಳೆ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಿರುವಿನಲ್ಲಿ ಚಾಲಕ ಬಸ್ಸಿನ ನಿಯಂತ್ರಣ ಕಳೆದುಕೊಂಡಿರುವುದು ಅಪಘಾತಕ್ಕೆ ಕಾರಣ ಎನ್ನಲಾಗಿದೆ.
ಶಸ್ತ್ರಚಿಕಿತ್ಸೆಗಾಗಿ ಬಾಲಕ ಸೇರಿದಂತೆ ಐವರು ಗಾಯಾಳುಗಳನ್ನು ಕೊಟ್ಟಾಯಂ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಗಿದೆ. ಉಳಿದ 38 ಮಂದಿಗೆ ಪತ್ತನಂತಿಟ್ಟ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಒದಗಿಸಲಾಗಿದೆ.
ಅಗ್ನಿ ಶಾಮಕ ಸಿಬ್ಬಂದಿ, ಪೊಲೀಸರು ಹಾಗೂ ಸ್ಥಳೀಯರು ರಕ್ಷಣಾ ಕಾರ್ಯಾಚರಣೆ ನಡೆಸಿದರು.