ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಪರಿಸ್ಥಿತಿ ಹದಗೆಟ್ಟಿದ್ದು, ಆತಂಕದ ಪರಿಸ್ಥಿತಿ ಇನ್ನೂ ಮುಂದುವರಿದಿದೆ. ಮತ್ತೊಂದೆಡೆ ಪ್ರತಿ ಐದು ಕುಟುಂಬಗಳ ಪೈಕಿ ನಾಲ್ಕು ಕುಟುಂಬಗಳವರು ಅನಾರೋಗ್ಯದಿಂದ ಬಳಲುವಂತಾಗಿದೆ.
ದೆಹಲಿಯಲ್ಲಿ ಕಳೆದ ಮೂರು ದಿನಗಳಿಂದ ವಾಯುಮಾಲಿನ್ಯ ವಿಪರೀತಗೊಂಡಿದ್ದು, ಒಟ್ಟಾರೆ ಏರ್ ಕ್ವಾಲಿಟಿ ಇಂಡೆಕ್ಸ್ ಬೆಳಗ್ಗೆ 9.30ರ ಸುಮಾರಿಗೆ 408ಕ್ಕೆ ತಲುಪಿದೆ. ನೆರೆಯ ರಾಜ್ಯಗಳಲ್ಲಿ ರೈತರು ಕೂಳೆ ಸುಟ್ಟ ಪರಿಣಾಮವಾಇ ಇಲ್ಲಿ ವಾಯುಮಾಲಿನ್ಯಗೊಂಡಿದೆ ಎಂದೂ ಆರೋಪಿಸಲಾಗುತ್ತಿದೆ.
ಈ ಮಧ್ಯೆ ವಾಯುಮಾಲಿನ್ಯದ ಕುರಿತಂತೆ ಸಮೀಕ್ಷೆಯೊಂದು ಹೊರಬಿದ್ದಿದ್ದು, ರಾಜಧಾನಿಯ ಪ್ರತಿ ಐದು ಕುಟುಂಬಗಳಲ್ಲಿ ನಾಲ್ಕು ಕುಟುಂಬ ಅನಾರೋಗ್ಯದಿಂದ ಬಳಲುತ್ತಿದೆ. ಅದರಲ್ಲೂ ಸಮೀಕ್ಷೆಗೆ ಒಳಪಡಿಸಿದ್ದವರ ಪೈಕಿ ಶೇ. 18 ಮಂದಿ ಈಗಾಗಲೇ ವಾಯುಮಾಲಿನ್ಯ ಸಂಬಂಧಿತ ಸಮಸ್ಯೆಗಳಿಗಾಗಿ ವೈದ್ಯರನ್ನು ಸಂಪರ್ಕಿಸಿದ್ದಾರೆ ಇಲ್ಲವೇ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ ಎಂದು ಈ ಸಮೀಕ್ಷೆ ಹೇಳಿದೆ.
ದೆಹಲಿ, ನೋಯ್ಡಾ, ಘಾಜಿಯಾಬಾದ್, ಗುರುಗ್ರಾಮ, ಫರಿದಾಬಾದ್ ಮುಂತಾದೆಡೆ ಈ ಸಮೀಕ್ಷೆಯನ್ನು ನಡೆಸಲಾಗಿದೆ. ಅದರಲ್ಲೂ ಸಮೀಕ್ಷೆಗೆ ಒಳಪಟ್ಟವರ ಪೈಕಿ ಶೇ. 80 ಕುಟುಂಬ ಮಾಲಿನ್ಯ ಸಂಬಂಧಿತ ಒಂದಲ್ಲ ಒಂದು ಸಮಸ್ಯೆಯಿಂದ ಬಳಲುತ್ತಿದೆ ಎಂಬುದೂ ಕಂಡುಬಂದಿದೆ.