ಮುಂಬೈ : ಎರಡು ದಶಕಗಳ ಹಿಂದಿನ ಕಸ್ಟಮ್ಸ್ ಸುಂಕ ಹಗರಣದ ವಿಚಾರಣೆ ಪೂರ್ಣಗೊಳಿಸಿರುವ ಇಲ್ಲಿನ ಸಿಬಿಐ ವಿಶೇಷ ನ್ಯಾಯಾಲಯ ಮೂವರು ಹಿರಿಯ ನಾಗರಿಕರಿಗೆ ಶಿಕ್ಷೆ ವಿಧಿಸಿದ್ದು, ₹5.5 ಕೋಟಿ ದಂಡವನ್ನೂ ವಿಧಿಸಿದೆ.
'ಆರ್ಥಿಕ ಅಪರಾಧಗಳು ದೇಶದ ಹಣಕಾಸಿನ ಸ್ಥಿತಿಗತಿ ಮೇಲೆ ಗಂಭೀರ ಪರಿಣಾಮಗಳನ್ನು ಉಂಟು ಮಾಡುತ್ತವೆ.
ಹೀಗಾಗಿ ಈ ಹಗರಣದ ಪ್ರಮುಖ ಆರೋಪಿಯಾಗಿರುವ ತೌಫಿಕ್ ಗಫರ್ (71) ಅವರಿಗೆ 7 ವರ್ಷ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ. ಜೊತೆಗೆ ₹5.3 ಕೋಟಿ ದಂಡ ಪಾವತಿಸುವಂತೆಯೂ ನಿರ್ದೇಶಿಸಲಾಗಿದೆ. ಆರೋಪಿ 2000ರಲ್ಲಿ ₹4.5 ಕೋಟಿ ತೆರಿಗೆ ವಂಚಿಸಿದ್ದರು. ಆ ಮೂಲಕ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡಿದ್ದರು. ಹೀಗಾಗಿ ದಂಡ ವಿಧಿಸಲಾಗಿದೆ' ಎಂದು ನ್ಯಾಯಾಧೀಶರಾದ ಎಸ್.ಯು.ವಡಗಾಂವ್ಕರ್ ಅವರು ಬುಧವಾರ ನೀಡಿದ ತೀರ್ಪಿನಲ್ಲಿ ಹೇಳಿದ್ದಾರೆ.
'ಈ ಹಿಂದೆ ಎಕ್ಸ್‌ಪೋರ್ಟ್ ಓರಿಯೆಂಟೆಡ್ ಯೂನಿಟ್ಸ್‌ನಲ್ಲಿ (ಇಒಯು) ಸಹಾಯಕ ಆಯುಕ್ತರಾಗಿದ್ದ 81 ವರ್ಷದ ವಿನಾಯಕ ಭೇಂಡೆ ಅವರಿಗೆ ಎರಡು ವರ್ಷ ಜೈಲು ಶಿಕ್ಷೆ ಹಾಗೂ ₹20 ಲಕ್ಷ ದಂಡ ವಿಧಿಸಲಾಗಿದೆ. ಇಒಯುನಲ್ಲಿ ಮೌಲ್ಯಮಾಪಕರಾಗಿ ಕೆಲಸ ಮಾಡಿದ್ದ 71 ವರ್ಷದ ವಿನಯ್ ಕುಮಾರ್ ಅವರಿಗೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ ₹5 ಲಕ್ಷ ದಂಡ ಹೇರಲಾಗಿದೆ. ಸರ್ಕಾರಿ ನೌಕರರಾಗಿದ್ದ ಇವರಿಬ್ಬರು ಮುಖ್ಯ ಆರೋಪಿ ಗಫರ್‌ಗೆ ಹಣಕಾಸಿನ ಲಾಭ ಪಡೆಯಲು ನೆರವಾಗಿದ್ದರು. ಆ ಮೂಲಕ ಕ್ರಿಮಿನಲ್ ಅಪರಾಧ ಎಸಗಿದ್ದರು' ಎಂದೂ ಆದೇಶದಲ್ಲಿ ತಿಳಿಸಲಾಗಿದೆ.