ನವದೆಹಲಿ: ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್(ಏಮ್ಸ್)ನ ಸರ್ವರ್ ಸತತ ಆರನೇ ದಿನವೂ ಡೌನ್ ಆಗಿದ್ದು, ಹ್ಯಾಕರ್‌ಗಳು ಅಂದಾಜು 200 ಕೋಟಿ ರೂಪಾಯಿ ಮೌಲ್ಯದ ಕ್ರಿಪ್ಟೋಕರೆನ್ಸಿಗೆ ಬೇಡಿಕೆ ಇಟ್ಟಿದ್ದಾರೆ ಎಂದು ಅಧಿಕೃತ ಮೂಲಗಳು ಸೋಮವಾರ ತಿಳಿಸಿವೆ.
ಬುಧವಾರ ಬೆಳಗ್ಗೆಯಿಂದಲೇ ಸರ್ವರ್ ಗಳು ಸ್ಥಗಿತಗೊಂಡಿದ್ದು, ತುರ್ತು, ಹೊರರೋಗಿ, ಒಳರೋಗಿ ಮತ್ತು ಪ್ರಯೋಗಾಲಯ ಸೇರಿದಂತೆ ಆಸ್ಪತ್ರೆಯ ಎಲ್ಲ ವಿಭಾಗಗಳನ್ನು ಕೈಯಿಂದ ನಿರ್ವಹಿಸಲಾಗುತ್ತಿದೆ.
ಇಂಡಿಯಾ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್(CERT-IN), ದೆಹಲಿ ಪೊಲೀಸರು ಮತ್ತು ಗೃಹ ಸಚಿವಾಲಯದ ಪ್ರತಿನಿಧಿಗಳು ರಾಮ್ಸಮ್ವೇರ್ ದಾಳಿಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಈ ಸಂಬಂಧ ನವೆಂಬರ್ 25 ರಂದು ದೆಹಲಿ ಪೊಲೀಸ್ ಗುಪ್ತಚರ ಫ್ಯೂಷನ್ ಮತ್ತು ಸ್ಟ್ರಾಟೆಜಿಕ್ ಆಪರೇಷನ್ (IFSO)ಘಟಕ ಸುಲಿಗೆ ಮತ್ತು ಸೈಬರ್ ಭಯೋತ್ಪಾದನೆಯ ಪ್ರಕರಣವನ್ನು ದಾಖಲಿಸಿದೆ.
ತನಿಖಾ ಸಂಸ್ಥೆಗಳ ಶಿಫಾರಸ್ಸಿನ ಮೇರೆಗೆ ಆಸ್ಪತ್ರೆಯಲ್ಲಿನ ಕಂಪ್ಯೂಟರ್‌ಗಳಲ್ಲಿ ಇಂಟರ್ನೆಟ್ ಸೇವೆಗಳನ್ನು ನಿರ್ಬಂಧಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
"ಹ್ಯಾಕರ್‌ಗಳು ಸುಮಾರು 200 ಕೋಟಿ ರೂಪಾಯಿ ಮೌಲ್ಯದ ಕ್ರಿಪ್ಟೋಕರೆನ್ಸಿಗೆ ಬೇಡಿಕೆ ಇಟ್ಟಿದ್ದಾರೆ" ಎಂದು ಮೂಲವೊಂದು ಪಿಟಿಐಗೆ ತಿಳಿಸಿದೆ.