ಹೈದರಾಬಾದ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಭಾನುವಾರ ತೆಲಂಗಾಣದಲ್ಲಿ ಮುಂದುವರೆದಿದೆ. ತಮ್ಮ ಪಾದಯಾತ್ರೆಯ 60ನೇ ದಿನವಾದ ಭಾನುವಾರ ಬೆಳಗ್ಗೆ ಮೇದಕ್ ಜಿಲ್ಲೆಯ ಅಲ್ಲಾದುರ್ಗದಲ್ಲಿ ಅವರು ಪಾದಯಾತ್ರೆ ಆರಂಭಿಸಿದರು.
ಅವರು ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಎ. ರೇವಂತ್ ರೆಡ್ಡಿ ಮತ್ತು ಇತರ ರಾಜ್ಯ ನಾಯಕರೊಂದಿಗೆ ಚಿಂತಲ್ ಲಕ್ಷ್ಮಾಪುರದಲ್ಲಿ ಮಧ್ಯಾಹ್ನದ ನಿಲುಗಡೆಗೆ ಮೊದಲು ಅಲ್ಲದುರ್ಗದ ಪ್ರಧಾನ ಕಚೇರಿಯ ವಿವಿಧ ಭಾಗಗಳಲ್ಲಿ ಸಂಚರಿಸಿದರು.
ಪಾದಯಾತ್ರೆಯ ವೇಳೆ ವಿವಿಧ ಕ್ಷೇತ್ರಗಳ ಜನರೊಂದಿಗೆ ಮತ್ತು ವಿವಿಧ ಗುಂಪುಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ರಾಹುಲ್, ಅವರ ಸಮಸ್ಯೆಗಳನ್ನು ಕೇಳಿದರು. ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಜನರತ್ತ ಕೈಬೀಸಿದರು ಮತ್ತು ಕೆಲ ಯುವಕರು ತಮ್ಮೊಂದಿಗೆ ಸೆಲ್ಫಿ ತೆಗೆಸಿಕೊಳ್ಳುವ ಮನವಿಯನ್ನು ಪುರಸ್ಕರಿಸಿದರು.
ಸಂಜೆ ನಾರಾಯಣಖೇಡ್‌ನ ನಿಜಾಮ್ ಅಂಡರ್‌ಪಾಸ್‌ನಲ್ಲಿ ಪಾದಯಾತ್ರೆ ಪುನರಾರಂಭಗೊಂಡು ಮಹದೇವಪಲ್ಲಿಯಲ್ಲಿ ದಿನದ ಅಂತ್ಯಗೊಳ್ಳಲಿದೆ. ಕಾಮರೆಡ್ಡಿ ಜಿಲ್ಲೆಯ ಜುಕ್ಕಲ್‌ನಲ್ಲಿ ರಾಹುಲ್ ರಾತ್ರಿತಂಗಿದರು.
ಭಾರತ್ ಜೋಡೋ ಯಾತ್ರೆ ಸೋಮವಾರ ಮಹಾರಾಷ್ಟ್ರ ಪ್ರವೇಶಿಸಲಿದೆ.
ಈಮಧ್ಯೆ, ಖ್ಯಾತ ವಕೀಲ ಮತ್ತು ಹೋರಾಟಗಾರ ಭರತ್ ಭೂಷಣ್ ಅವರು ಪಾದಯಾತ್ರೆಯಲ್ಲಿ ರಾಹುಲ್ ಗಾಂಧಿಯನ್ನು ಸೇರುವ ಮೂಲಕ ಯಾತ್ರೆಗೆ ಬೆಂಬಲ ನೀಡಿದರು. ರಾಜಕೀಯ ಕಾರ್ಯಕರ್ತ ಯೋಗೇಂದ್ರ ಯಾದವ್ ಕೂಡ ಕಾಂಗ್ರೆಸ್ ನಾಯಕನೊಂದಿಗೆ ನಡೆದರು.
ಮಾದಿಗ ಮೀಸಲಾತಿ ಹೋರಾಟ ಸಮಿತಿ (ಎಂಆರ್‌ಪಿಎಸ್) ಮುಖಂಡ ಮಂದ ಕೃಷ್ಣ ಮಾದಿಗ ಕೂಡ ರಾಹುಲ್ ಗಾಂಧಿ ಅವರನ್ನು ಪಾದಯಾತ್ರೆಯಲ್ಲಿ ಭೇಟಿ ಮಾಡಿ, ತಮ್ಮ ಸಂಘಟನೆಯ ಬಹುಕಾಲದ ಪರಿಶಿಷ್ಟ ಜಾತಿ ಮೀಸಲಾತಿಗೆ ಬೇಡಿಕೆ ಇಟ್ಟಿರುವ ಕುರಿತು ವಿವರಿಸಿದರು.
ಜನರನ್ನು ಒಗ್ಗೂಡಿಸಲು ಮತ್ತು 'ಬಿಜೆಪಿ ಮತ್ತು ಆರ್‌ಎಸ್‌ಎಸ್ ಹರಡುತ್ತಿರುವ ದ್ವೇಷ ಮತ್ತು ಹಿಂಸಾಚಾರದ ವಿರುದ್ಧ ರಾಹುಲ್ ಗಾಂಧಿ ಸೆಪ್ಟೆಂಬರ್ 7 ರಂದು ಕನ್ಯಾಕುಮಾರಿಯಿಂದ ಭಾರತ್ ಜೋಡೋ ಯಾತ್ರೆಯನ್ನು ಪ್ರಾರಂಭಿಸಿದ್ದರು. ಈ ಯಾತ್ರೆಯು 12 ರಾಜ್ಯಗಳ ಮೂಲಕ 3,750 ಕಿಮೀ ದೂರ ಕ್ರಮಿಸಲಿದ್ದು, ಶ್ರೀನಗರದಲ್ಲಿ ಮುಕ್ತಾಯಗೊಳ್ಳಲಿದೆ.
ಯಾತ್ರೆ ಈಗಾಗಲೇ ತಮಿಳುನಾಡು, ಕೇರಳ, ಕರ್ನಾಟಕ ಮತ್ತು ಆಂಧ್ರಪ್ರದೇಶವನ್ನು ಪೂರ್ಣಗೊಳಿಸಿದ್ದು, ಅಕ್ಟೋಬರ್ 23 ರಂದು ಕರ್ನಾಟಕದಿಂದ ತೆಲಂಗಾಣವನ್ನು ಪ್ರವೇಶಿಸಿತು.
ರಾಜ್ಯದ ಮೂಲಕ ತನ್ನ ಯಾತ್ರೆಯಲ್ಲಿ ನಾಲ್ಕು ದಿನಗಳ ವಿರಾಮವನ್ನು ಹೊಂದಿತ್ತು. ತೆಲಂಗಾಣದಲ್ಲಿ 19 ವಿಧಾನಸಭೆ ಮತ್ತು 7 ಸಂಸದೀಯ ಕ್ಷೇತ್ರಗಳಲ್ಲಿ ಯಾತ್ರೆ ಒಟ್ಟು 375 ಕಿ.ಮೀ. ಸಾಗಲಿದೆ.
ತೆಲಂಗಾಣದಲ್ಲಿ ನಡೆಯುತ್ತಿರುವ ಯಾತ್ರೆಯಲ್ಲಿ ರಾಹುಲ್ ಗಾಂಧಿ ಕೇಂದ್ರದ ಬಿಜೆಪಿ ಸರ್ಕಾರ ಮತ್ತು ರಾಜ್ಯದಲ್ಲಿ ಟಿಆರ್‌ಎಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಶನಿವಾರ ಪೆದ್ದಾಪುರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅಥವಾ ಕೃಷಿ ಸಚಿವ ಎನ್.ನಿರಂಜನರೆಡ್ಡಿ ಅವರಿಗೆ ಕಿಂಚಿತ್ತೂ ತಿಳುವಳಿಕೆ ಇಲ್ಲ. ಧರಣಿ ಪೋರ್ಟಲ್ ಹೆಸರಿನಲ್ಲಿ ಮುಖ್ಯಮಂತ್ರಿಗಳು ರೈತರ ಜಮೀನು ಕಬಳಿಸುತ್ತಿದ್ದಾರೆ ಎಂದು ಆರೋಪಿಸಿದರು.
ತೆಲಂಗಾಣ ಮಾತ್ರವಲ್ಲದೆ ದೇಶದಾದ್ಯಂತ ರೈತರು, ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ನೌಕರರ ಸ್ಥಿತಿ ಚೆನ್ನಾಗಿಲ್ಲ. 2014 ರ ನಂತರ, ನಿರುದ್ಯೋಗ ಮತ್ತು ಬಡತನವು ಹಲವು ಪಟ್ಟು ಹೆಚ್ಚಾಗಿದೆ. ದೇಶ ಇಂತಹ ದುಃಸ್ಥಿತಿಯಲ್ಲಿ ಸಾಗುತ್ತಿರುವಾಗ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ತಮ್ಮ ಸ್ವಹಿತಾಸಕ್ತಿಗಾಗಿ ಶ್ರಮಿಸುತ್ತಿದ್ದಾರೆ ಎಂದರು.