ಕಟಕ್: ನಾಯಿ ಕಚ್ಚಿದರೆ ಅದನ್ನು ನಿರ್ಲಕ್ಷ್ಯ ಮಾಡದೇ ವೈದ್ಯರ ಬಳಿ ಚಿಕಿತ್ಸೆ ಪಡೆದುಕೊಳ್ಳುವುದು ಬಹಳ ಉತ್ತಮ. ಅಯ್ಯೋ ಏನು ಆಗುವುದಿಲ್ಲ ಬಿಡು ಅಂತಾ ಸುಮ್ಮನಾದರೇ ಏನಾದರೂ ಕೂಡ ಆಗಬಹುದು, ಕೊನೆಗೆ ಸಾವು ಕೂಡ ಸಂಭವಿಸಬಹುದು. ಒಡಿಶಾದ ಕಟಕ್ನಲ್ಲಿ ನಡೆದ ಈ ಘಟನೆ ತುಂಬಾ ವಿಚಿತ್ರವಾಗಿರುವುದರ ಜೊತೆಗೆ ಆತಂಕಕಾರಿಯು ಹೌದು.
ನಾಯಿಯಿಂದ ಕಚ್ಚಿಸಿಕೊಂಡ ಯುವಕನೊಬ್ಬ ಆರು ತಿಂಗಳ ಬಳಿಕ ನಾಯಿಯಂತೆ ಬೊಗಳುತ್ತಿರುವ ವಿಚಿತ್ರ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ಈ ಘಟನೆ ಒಡಿಶಾದ ಕಟಕ್ ಜಿಲ್ಲೆಯ ಅಥಾಗಢ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಉದಯಪುರ ಎಂಬಲ್ಲಿ ನಡೆದಿದೆ.
ಗ್ರಾಮದ ರಾಜೇಶ್ ಬ್ಯೂರ ಎಂಬಾತ ಆರು ತಿಂಗಳ ಹಿಂದೆ ನಾಯಿಯಿಂದ ಕಚ್ಚಿಸಿಕೊಂಡಿದ್ದ. ಆದರೆ, ಮುಂಜಾಗ್ರತ ಕ್ರಮವಾಗಿ ಆತ ಯಾವುದೇ ಚಿಕಿತ್ಸೆ ಪಡೆದುಕೊಂಡಿರಲಿಲ್ಲ. ಇದೀಗ ನವೆಂಬರ್ 1 ರಿಂದ ರಾಜೇಶ್, ನಾಯಿಯಂತೆ ಬೊಗಳಲು ಆರಂಭಿಸಿದ್ದಾನೆ.
ರಾಜೇಶನ ನಡೆ ಮತ್ತು ಆತನ ವಿಚಿತ್ರ ಶಬ್ದದಿಂದ ಆಶ್ಚರ್ಯಗೊಂಡು ಏನು ಮಾಡಬೇಕೆಂದು ತಿಳಿಯದೆ, ಅವನ ಕುಟುಂಬದ ಸದಸ್ಯರು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಸಾಗಿಸಿದರು. ಆದರೆ, ಆತನ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟಿದ್ದರಿಂದ ಸ್ಥಳೀಯ ವೈದ್ಯರ ಸಲಹೆ ಮೇರೆಗೆ ರಾಜೇಶ್ನನ್ನು ಕಟಕ್ ಮೂಲದ ಎಸ್‌ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ರಾಜೇಶ್ನನ್ನು ಪರೀಕ್ಷೆ ಮಾಡಿದ ವೈದ್ಯರು, ನಾಯಿ ಕಚ್ಚಿದ ನಂತರ ಆತ ಚಿಕಿತ್ಸೆ ತೆಗೆದುಕೊಳ್ಳದ ಕಾರಣ ಆತ ಹೈಡ್ರೋಫೋಬಿಯಾ ಅಥವಾ ನೀರಿನ ಭಯವನ್ನು ಹೊಂದಿರುತ್ತಾನೆ. ಅದರ ಲಕ್ಷಣಗಳಲ್ಲಿ ಲಾರಿಂಗೊಸ್ಪಾಸ್ಮ್ (ಲಾರಿಂಗೊಸ್ಪಾಸ್ಮ್ ಎನ್ನುವುದು ಧ್ವನಿ ಪೆಟ್ಟಿಗೆಯ ಸೆಳೆತ ಸ್ಥಿತಿಯಾಗಿದ್ದು, ಇದರಿದ ತಾತ್ಕಾಲಿಕವಾಗಿ ಮಾತನಾಡಲು ಅಥವಾ ಉಸಿರಾಡಲು ಕಷ್ಟವಾಗುತ್ತದೆ) ಕೂಡ ಇರುತ್ತದೆ. ಈ ಲಾರಿಂಗೊಸ್ಪಾಸ್ಮ್ನ ಕಾರಣದಿಂದಾಗಿ, ರೋಗಿಯು ಕೆಲವೊಮ್ಮೆ ನಾಯಿಗಳಂತೆ ಕೂಗುತ್ತಾನೆ ಎಂದು ವೈದ್ಯರು ತಿಳಿಸಿದ್ದಾರೆ.