ನವದೆಹಲಿ: ಸರ್ಕಾರದ 'ಉದ್ಯೋಗ ಮೇಳ' ಕಾರ್ಯಕ್ರಮದಡಿ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ 71,056 ಉದ್ಯೋಗಾಕಾಂಕ್ಷಿಗಳಿಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ನೇಮಕಾತಿ ಪತ್ರಗಳನ್ನು ವಿತರಿಸಿದರು.
ಮಾದರಿ ನೀತಿ ಸಂಹಿತೆ ಜಾರಿಯಿರುವ ಗುಜರಾತ್, ಹಿಮಾಚಲ ಪ್ರದೇಶ ಹೊರತುಪಡಿಸಿ ದೇಶದ ದೇಶದ 45 ಸ್ಥಳಗಳಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಭೌತಿಕವಾಗಿ ನೇಮಕಾತಿ ಆದೇಶ ಪತ್ರಗಳನ್ನು ನೀಡಲಾಯಿತು.
ಅಕ್ಟೋಬರ್‌ನಲ್ಲಿ 75 ಸಾವಿರ ಜನರಿಗೆ ನೇಮಕಾತಿ ಪತ್ರಗಳನ್ನು ವಿತರಿಸಲಾಗಿತ್ತು. ಮುಂದಿನ ಒಂದೂವರೆ ವರ್ಷಗಳಲ್ಲಿ 10 ಲಕ್ಷ ಜನರಿಗೆ ಉದ್ಯೋಗಾವಕಾಶ ಒದಗಿಸಬೇಕು ಎಂದು ಪ್ರಧಾನಿ ಮೋದಿ ಅವರು ಕಳೆದ ಜೂನ್‌ನಲ್ಲಿ ಸರ್ಕಾರದ ವಿವಿಧ ಇಲಾಖೆಗಳು ಮತ್ತು ಸಚಿವಾಲಯಗಳಿಗೆ ಸೂಚಿಸಿದ್ದರು.
ದುಪ್ಪಟ್ಟು ಪ್ರಯೋಜನ:
ಕೇಂದ್ರ ಸರ್ಕಾರ ನಡೆಸುತ್ತಿರುವ ಉದ್ಯೋಗ ಮೇಳಗಳ ಜತೆಗೆ ಎನ್‌ಡಿಎ ಆಡಳಿತವಿರುವ ರಾಜ್ಯಗಳಲ್ಲೂ ಉದ್ಯೋಗ ಮೇಳಗಳು ಜರುಗುತ್ತಿವೆ. ಇದು 'ಡಬಲ್ ಎಂಜಿನ್' ಸರ್ಕಾರಗಳಿಮದ ಅಲ್ಲಿನ ಜನರಿಗೆ ದೊರೆಯುತ್ತಿರುವ ದುಪ್ಪಟ್ಟು ಪ್ರಯೋಜನವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ತಿಂಗಳ ಹಿಂದೆಯಷ್ಟೇ ಮಹಾರಾಷ್ಟ್ರ, ಗುಜರಾತ್ ಸರ್ಕಾರಗಳು ಅಲ್ಲಿನ ಸಹಸ್ರಾರು ಉದ್ಯೋಗಾಕಾಂಕ್ಷಿಗಳಿಗೆ ನೇಮಕಾತಿ ಪತ್ರ ನೀಡಿವೆ. ಕೆಲ ದಿನಗಳ ಹಿಂದೆಯಷ್ಟೇ ಉತ್ತರ ಪ್ರದೇಶ ಸರ್ಕಾರ ಈ ರೀತಿ ನೇಮಕಾತಿ ಪತ್ರಗಳನ್ನು ಯುವ ಸಮುದಾಯದವರಿಗೆ ವಿತರಿಸಿದೆ. ಜಮ್ಮು ಮತ್ತು ಕಾಶ್ಮಿರ, ಲಡಾಖ್, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಲಕ್ಷದ್ವೀಪ, ದಾದ್ರಾ ಮತ್ತು ನಗರ್ ಹವೇಲಿ, ದಾಮನ್ ಮತ್ತು ದಿಯು, ಚಂಡೀಗಡಗಳಲ್ಲೂ ಉದ್ಯೋಗ ಮೇಳಗಳು ಜರುಗಿವೆ ಎಂದು ಪ್ರಧಾನಿ ಹೇಳಿದರು.
ಇದೇ 24ರಂದು ಗೋವಾ ಹಾಗೂ ಇದೇ 28ರಂದು ತ್ರಿಪುರಾದಲ್ಲಿ ಉದ್ಯೋಗ ಮೇಳಗಳು ನಡೆಯಲಿವೆ ಎಂದು ಅವರು ತಿಳಿಸಿದರು.
'ಕರ್ಮಯೋಗಿ ಪ್ರಾರಂಭ' ಮಾದರಿ:
ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹೊಸದಾಗಿ ನೇಮಕಗೊಂಡವರಿಗೆ ಆನ್‌ಲೈನ್ ಮೂಲಕ 'ಓರಿಯಂಟೇಷನ್ ಕೋರ್ಸ್'ಗಳನ್ನು ನಡೆಸುವ 'ಕರ್ಮಯೋಗಿ ಪ್ರಾರಂಭ' ಮಾದರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಚಾಲನೆ ನೀಡಿದರು.
ಸರ್ಕಾರಿ ಸಿಬ್ಬಂದಿಗಿರುವ ನೀತಿ ಸಂಹಿತೆ, ಕೆಲಸದ ಸ್ಥಳದಲ್ಲಿ ನೈತಿಕತೆ ಮತ್ತು ಸಮಗ್ರತೆ, ಮಾನವ ಸಂಪನ್ಮೂಲದ ನೀತಿ ಮತ್ತು ಇತರೆ ಪ್ರಯೋಜನಗಳು ಹಾಗೂ ಭತ್ಯೆಗಳಿಗೆ ಸಂಬಂಧಿಸಿದ ಮಾಹಿತಿ ಈ ಕೋರ್ಸ್‌ನಲ್ಲಿ ದೊರೆಯಲಿದೆ. ಈ ಮೂಲಕ ಹೊಸ ಸಿಬ್ಬಂದಿಗೆ ಸೇವಾ ನಿಯಮಗಳನ್ನು ತಿಳಿದುಕೊಳ್ಳಲು ಮತ್ತು ಅದರಂತೆ ಕಾರ್ಯ ನಿರ್ವಹಿಸಲು ಉಪಯುಕ್ತವಾಗಲಿದೆ ಎಂದು ಪ್ರಧಾನಿ ಹೇಳಿದರು.