ಕಾಸರಗೋಡು: ಅಮೆರಿಕದಲ್ಲಿ ಡಾಕ್ಟರ್ ಎಂದು ಇನ್‍ಸ್ಟಾಗ್ರಾಂನಲ್ಲಿ ಪರಿಚಯಿಸಿಕೊಂಡು ಮಹಿಳೆಯಿಂದ 7 ಲಕ್ಷ ರೂ. ಲಪಟಾಯಿಸಿದ ಯುವಕನನ್ನು ಸೈಬರ್ ಸೆಲ್ ಪೋಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶ ಬರೇಲಿ ನಿವಾಸಿ ಮೊಹಮ್ಮದ್ ಶಾರೀಕ್(19)ನನ್ನು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ.ವೈಭವ್ ಸಕ್ಸೇನಾ ಅವರ ಮೇಲ್ನೋಟದಲ್ಲಿ ಕಾಸರಗೋಡು ಸೈಬರ್ ಸೆಲ್ ಠಾಣೆಯ ಇನ್‍ಸ್ಪೆಕ್ಟರ್ ಪ್ರೇಮ್‍ಸದನ್ ನೇತೃತ್ವದಲ್ಲಿ ಎಎಸ್‍ಐ ಪ್ರೇಮ್‍ರಾಜ್, ಸಿಪಿಒಗಳಾದ ಸಬಾದ್ ಅಶ್ರಫ್, ಹರಿಪ್ರಸಾದ್ ತಂಡ ರಾಯಬರೇಲಿಯಿಂದ ಬಂಧಿಸಿ ಕಾಸರಗೋಡಿಗೆ ತರಲಾಗಿದೆ. ಮಧೂರು ಗ್ರಾಮ ಪಂಚಾಯತ್‍ಗೊಳಪಟ್ಟ ನಿವಾಸಿ, ಸ್ನಾತಕೋತ್ತರ ಪದವೀಧರೆಯಾಗಿರುವ 36 ರ ಹರೆಯದ ಮಹಿಳೆ ನೀಡಿದ ದೂರಿನಂತೆ ಸೈಬರ್ ಸೆಲ್ ಪ್ರಕರಣ ದಾಖಲಿಸಿಕೊಂಡಿದ್ದರು.
ಪೋಲೀಸರು ನೀಡಿದ ಮಾಹಿತಿ : ಸ್ನಾತಕೋತ್ತರ ಪದವೀಧರೆಯಾಗಿರುವ ಮಹಿಳೆಗೆ ಅರ್ಹತೆಗೆ ತಕ್ಕಂತೆ ಉದ್ಯೋಗ ಲಭಿಸಿರಲಿಲ್ಲ. ಈಕೆಯ ಪತಿ ಕೂಲಿ ಕಾರ್ಮಿಕನಾಗಿದ್ದಾರೆ. ಈ ದಂಪತಿಗೆ 14 ವರ್ಷದ ಪುತ್ರನೂ ಇದ್ದಾನೆ. ಆ ಬಳಿಕ ಈ ದಂಪತಿಗೆ ಮಕ್ಕಳಾಗಲಿಲ್ಲ. ಈ ಕಾರಣದಿಂದ ಆಕೆಯನ್ನು ಮಾನಸಿಕವಾಗಿ ನೊಂದುಕೊಳ್ಳುವಂತೆ ಮಾಡಿತ್ತು. ಈ ಮಧ್ಯೆ ಆಕೆಯ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಯುವತಿಯೋರ್ವಳ ಹೆಸರಿನಲ್ಲಿ ಆರೋಪಿ ಮೊಹಮ್ಮದ್ ಶಾರೀಕ್ ಆಕೆಯನ್ನು ಸಂಪರ್ಕಿಸಿ ಪರಿಚಯಿಸಿಕೊಂಡನು. ನಾನು ಪ್ಲಸ್ ಟು ನಲ್ಲಿ ನಿನ್ನ ಜೊತೆ ಕಲಿತ ಹುಡುಗಿಯಾಗಿದ್ದೇನೆ ಎಂದು ಹೇಳಿ ಆಕೆಯನ್ನು ಸಂಪರ್ಕಿಸಿದ್ದನು. ಹೀಗೆ ಕ್ಲಾಸ್‍ಮೇಟ್ ಎಂಬ ಹೆಸರಿನಲ್ಲಿ ಅವರಿಬ್ಬರು ಇನ್‍ಸ್ಟಾಗ್ರಾಂನಲ್ಲಿ ಪರಸ್ಪರ ಚಾಟ್ ಆರಂಭಿಸಿದ್ದರು. ತನಗೆ ಎರಡನೇ ಬಾರಿ ಗರ್ಭಿಣಿಯಾಗಲು ಸಾಧ್ಯವಾಗುತ್ತಿಲ್ಲವೆಂದು ತನ್ನ ಮನದಾಳದ ಬೇಸರವನ್ನು ಆಕೆ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಳು. ಅದಕ್ಕೆ ನೀನು ಬೇಸರಪಡುವುದು ಬೇಡ. ಅಮೆರಿಕದಲ್ಲಿ ತಾನು ತಿಳಿದಿರುವ ಓರ್ವ ತಜ್ಞ ವೈದ್ಯರಿದ್ದಾರೆ. ಅವರಲ್ಲಿ ಈ ವಿಷಯ ತಿಳಿಸಿ ನಿನಗೆ ಅಗತ್ಯದ ಔಷಧಿ ಕಳುಹಿಸಿ ಕೊಡುತ್ತಾನೆ ಎಂದು ತಿಳಿಸಿದ್ದನು. ಮಾತ್ರವಲ್ಲ ಬಳಿಕ ಅಮೆರಿಕಾದ ವೈದ್ಯರ ಹೆಸರಿನಲ್ಲಿ ಆತ ಆ ಮಹಿಳೆಯನ್ನು ಸಂಪರ್ಕಿಸಿ ವೈದ್ಯನೆಂಬ ನೆಲೆಯಲ್ಲಿ ಗರ್ಭಧರಿಸಲು ಅಗತ್ಯದ ಔಷಧÀ ಸಾಮಗ್ರಿಗಳನ್ನು ಕಳುಹಿಸಿಕೊಡುವುದಾಗಿ ಆತ ಇನ್‍ಸ್ಟಾಗ್ರಾಂನಲ್ಲಿ ತಿಳಿಸಿದ್ದನು. ಈ ಮಧ್ಯೆ ಆಕೆ ಗರ್ಭಿಣಿಯಾಗುವ ಸೌಭಾಗ್ಯ ಒದಗಿಬಂತು. ಆ ವಿಷಯವನ್ನೂ ಆಕೆ ಇನ್‍ಸ್ಟಾಗ್ರಾಂನಲ್ಲಿ ತಿಳಿಸಿದ್ದಳು. ಆಗ ನಿನ್ನನ್ನು ಪರಿಚಯಿಸಿಕೊಂಡ ದಿನದಿಂದ ಭಾಗ್ಯವೆಂಬಂತೆ ನನಗೆ ಭಾರೀ ಆರ್ಥಿಕ ಆದಾಯ ಕುದುರುತ್ತಾ ಬಂದಿದೆ. ಈ ಸಂತೋಷದಿಂದ ನಾನು ನಿನಗೆ 15 ಸಾವಿರ ಪೌಂಡ್‍ನ ಪಾರ್ಸೆಲ್‍ನ್ನು ಕಳುಹಿಸಿಕೊಡುವೆ ಎಂದು ತಿಳಿಸಿದ್ದನು. ಆದಾದ ಕೆಲವು ದಿನಗಳ ಬಳಿಕ ಪಾರ್ಸೆಲ್ ಸಂಸ್ಥೆಯ ಹೆಸರಿನಲ್ಲಿ ಮಹಿಳೆಗೆ ಸಂದೇಶವೊಂದು ಬಂತು. ನಿನಗೊಂದು ಪಾರ್ಸೆಲ್ ಬಂದಿದೆ. ಅದನ್ನು ಪಡೆಯಲು 5 ಲಕ್ಷ ರೂ. ಪಾವತಿಸಬೇಕೆಂದು ಸಂದೇಶದಲ್ಲಿ ತಿಳಿಸಲಾಗಿತ್ತು. ಆಗ ನನ್ನಲ್ಲಿ ಅಷ್ಟೊಂದು ಹಣವಿಲ್ಲ. ಮೊದಲು ಎರಡೂವರೆ ಲಕ್ಷ ರೂ. ಪಾವತಿಸಿ ನಂತರ ಬಾಕಿ ಹಣ ಕಳುಹಿಸಿಕೊಡುವೆ ಎಂದು ಆಕೆ ತಿಳಿಸಿದ್ದಾಳೆ. ಅದಾದ ಬಳಿಕ ವೈದ್ಯರ ಹೆಸರಿನಲ್ಲಿ ಆರೋಪಿ ಆಕೆಯನ್ನು ಪದೇ ಪದೇ ಸಂಪರ್ಕಿಸಿ ಏಳು ಲಕ್ಷ ರೂ. ನೀಡಬೇಕು. ಇಲ್ಲದಿದ್ದಲ್ಲಿ ಪರಿಸ್ಥಿತಿ ನೆಟ್ಟಗಿರದು ಎಂದು ಬೆದರಿಕೆಯೊಡ್ಡತೊಡಗಿದೆ. ಬೆದರಿಕೆಯಿಂದಾಗಿ ಆಕೆ ತನ್ನಲ್ಲಿದ್ದ ಚಿನ್ನದೊಡವೆ ಇತ್ಯಾದಿ ಅಡವಿರಿಸಿ 7 ಲಕ್ಷ ರೂ. ಕಳುಹಿಸಿಕೊಟ್ಟಿದ್ದಳು. ಆದಾದ ಬಳಿಕವೇ ಆಕೆ ತಾನು ವಂಚನೆಗೊಳಗಾದ ಸತ್ಯ ಅರಿವಾಗಿದೆ. ಬಳಿಕ ಆಕೆ ಸೈಬರ್ ಸೆಲ್‍ಗೆ ದೂರು ನೀಡಿದ್ದು, ಇದರಂತೆ ಬರೇಲಿಗೆ ತೆರಳಿ ಅಲ್ಲಿನ ಪೋಲೀಸರ ನೆರವಿನೊಂದಿಗೆ ಬಂಧಿಸಿದ್ದಾರೆ. ಆರೋಪಿ ಹರಿಯಾಣದಲ್ಲಿ ಒಂದೇ ಆಧಾರ್ ಕಾರ್ಡ್ ಬಳಸಿ ಎಂಟು ಬ್ಯಾಂಕ್‍ಗಳಲ್ಲಿ ಖಾತೆ ತೆರೆದಿದ್ದನು. ಮಹಿಳೆ ಕಳುಹಿಸಿಕೊಟ್ಟ ಹಣವನ್ನು ಆ ಖಾತೆಯಲ್ಲಿ ಜಮಾಯಿಸಿದ್ದನೆಂದು ತನಿಖೆಯಿಂದ ತಿಳಿದು ಬಂದಿದೆ.
ಇನ್ನೊಬ್ಬ ಆರೋಪಿಗಾಗಿ ಶೋಧ : 7 ಲಕ್ಷ ರೂ. ವಂಚಿಸಿದ ಪ್ರಕರಣದಲ್ಲಿ ಇನ್ನೋರ್ವ ಆರೋಪಿ ಉತ್ತರ ಪ್ರದೇಶದ ಬರೇಲಿ ನಿವಾಸಿ ನಸ್ರತ್‍ಗಾಗಿ ಸೈಬರ್ ಸೆಲ್ ಶೋಧ ನಡೆಸುತ್ತಿದೆ. ಶಾರೀಕ್‍ಗೆ ಬೇಕಾಗಿ ಇನ್‍ಸ್ಟಾಗ್ರಾಂನಲ್ಲಿ ಇಂಗ್ಲೀಷ್ ಭಾಷೆಯಲ್ಲಿ ಚಾಟ್ ಟೈಪ್ ಮಾಡಿ ಮಹಿಳೆಗೆ ಕಳುಹಿಸಿಕೊಟ್ಟಿರುವುದು ನಸ್ರತ್ ಎಂಬುದಾಗಿ ತನಿಖೆಯಿಂದ ತಿಳಿದು ಬಂದಿದೆ.
ಬಂಧಿತ ಆರೋಪಿಯ ಎಲ್ಲಾ 8 ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿದ್ದಾರೆ. ನುಸ್ರತ್‍ನ ಕುರಿತಾದ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಶಾರೀಕ್‍ನನ್ನು ನ್ಯಾಯಾಂಗ ಬಂಧನದಿಂದ ಮತ್ತೆ ಕಸ್ಟಡಿಗೆ ಪಡೆದುಕೊಳ್ಳಲು ಸೋಮವಾರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವುದಾಗಿ ಪೋಲೀಸರು ತಿಳಿಸಿದ್ದಾರೆ. ಈತನಿಗೆ ಹಿಂದಿ ಭಾಷೆ ಮಾತ್ರವೇ ತಿಳಿದಿದೆ. ಇಂಗ್ಲೀಷ್ ತಿಳಿದಿಲ್ಲ. ಅದಕ್ಕಾಗಿ ಆತ ತನ್ನ ಇನ್‍ಸ್ಟಾಗ್ರಾಂನಲ್ಲಿ ಇಂಗ್ಲೀಷ್‍ನಲ್ಲಿ ಚಾಟ್ ಮಾಡಲು ನಸ್ರತ್‍ನನ್ನು ಬಳಸಿಕೊಂಡಿದ್ದನೆಂದು ಪೋಲೀಸರು ತಿಳಿಸಿದ್ದಾರೆ.
ಇನ್‍ಸ್ಟಾಗ್ರಾಂನಲ್ಲಿ ಪರಿಚಯ : 7 ಲಕ್ಷ ರೂ. ವಂಚನೆ; ಬಂಧನ
0
ನವೆಂಬರ್ 25, 2022
Tags