ನವದೆಹಲಿ:ಸರ್ವೋಚ್ಚ ನ್ಯಾಯಾಲಯವು ಆರ್ಥಿಕವಾಗಿ ದುರ್ಬಲ ವರ್ಗ (ಇಡಬ್ಲುಎಸ್)ಕ್ಕೆ ಸೇರಲು ವಾರ್ಷಿಕ ಎಂಟು ಲ.ರೂ.ಗಿಂತ ಕಡಿಮೆ ಆದಾಯವನ್ನು ನಿಗದಿಗೊಳಿಸಿರುವ ನಿರ್ಧಾರವನ್ನು ಎತ್ತಿ ಹಿಡಿದಿರುವಾಗ ಆದಾಯ ತೆರಿಗೆ ಸಂಗ್ರಹಕ್ಕೆ 2.5 ಲ.ರೂ.ಗಳು ಮೂಲ ವಾರ್ಷಿಕ ಆದಾಯವಾಗುವುದು ಹೇಗೆ ಸಾಧ್ಯ?
ಇದು
ಮದ್ರಾಸ್ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಲಾಗಿರುವ ಅರ್ಜಿಯೊಂದರ ಕೇಂದ್ರವಾಗಿರುವ
ಪ್ರಶ್ನೆಯಾಗಿದೆ. ಅರ್ಜಿಗೆ ಉತ್ತರಿಸುವಂತೆ ನ್ಯಾಯಾಲಯವು ಕೇಂದ್ರ ಸರಕಾರಕ್ಕೆ
ಸೂಚಿಸಿದೆ.ಮೇಲ್ಜಾತಿಗಳಲ್ಲಿಯ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಶೇ.10ರಷ್ಟು
ಮೀಸಲಾತಿಯನ್ನು ಒದಗಿಸಿರುವ 103ನೇ ಸಂವಿಧಾನ ತಿದ್ದುಪಡಿ ಕಾಯ್ದೆಯನ್ನು ಸರ್ವೋಚ್ಚ
ನ್ಯಾಯಾಲಯವು ನ.7ರಂದು 3:2 ಬಹುಮತದಿಂದ ಎತ್ತಿ ಹಿಡಿದಿತ್ತು.
ಇಡಬ್ಲುಎಸ್ ಕೋಟಾ
'ಆರ್ಥಿಕವಾಗಿ ದುರ್ಬಲ'ವರ್ಗಕ್ಕೆ ಸೇರ್ಪಡೆಗೆ ಆದಾಯವನ್ನು ನಿರ್ಣಾಯಕ ಅಂಶವನ್ನಾಗಿ
ಪರಿಗಣಿಸುತ್ತದೆ. ಆದಾಗ್ಯೂ ಅರ್ಜಿಯಲ್ಲಿ ಎತ್ತಿ ತೋರಿಸಿರುವಂತೆ ಕೋಟಾದೊಳಗಿನ ದೊಡ್ಡ
ವಿಭಾಗವು ಆದಾಯ ತೆರಿಗೆಯನ್ನು ಪಾವತಿಸಬೇಕಾದ ಆದಾಯ ಸ್ತರದಲ್ಲಿದೆ.
ಅರ್ಜಿದಾರರಾಗಿರುವ
ಕೃಷಿಕ ಹಾಗೂ ಡಿಎಂಕೆ ಸದಸ್ಯ ಕುನ್ನೂರ್ ಸೀನಿವಾಸನ್ ಅವರು ಹಣಕಾಸು ಕಾಯ್ದೆ,2022ರ
ಮೊದಲ ಅನುಬಂಧದ ಭಾಗ 1ರ ಪ್ಯಾರಾ ಎ ಅನ್ನು ತೆಗೆಯುವಂತೆ ಕೋರಿದ್ದಾರೆ. ಈ ಭಾಗವು ಆದಾಯ
ತೆರಿಗೆ ದರವನ್ನು ನಿಗದಿಗೊಳಿಸುತ್ತದೆ ಮತ್ತು ಇದರಂತೆ 2.5 ಲ.ರೂ.ಗಿಂತ ಕಡಿಮೆ ಒಟ್ಟು
ವಾರ್ಷಿಕ ಆದಾಯವನ್ನು ಹೊಂದಿರುವವರು ತೆರಿಗೆಯನ್ನು ಪಾವತಿಸಬೇಕಿಲ್ಲ. ಈ ಭಾಗವು ಈಗ
ಸಂವಿಧಾನದ 14,15,16,21 ಮತ್ತು 265ನೇ ವಿಧಿಗಳಿಗೆ ವಿರುದ್ಧವಾಗಿದೆ ಎಂದು ಸೀನಿವಾಸನ್
ಅರ್ಜಿಯಲ್ಲಿ ಬೆಟ್ಟು ಮಾಡಿದ್ದಾರೆ.ಡಿಎಂಕೆಯ ಆಸ್ತಿ ಸಂರಕ್ಷಣಾ ಮಂಡಳಿಯ ಸದಸ್ಯರಾಗಿರುವ
82ರ ಹರೆಯದ ಸೀನಿವಾಸನ್,2.5 ಲ.ರೂ.ಆದಾಯವಿರುವ ವ್ಯಕ್ತಿಯಿಂದ ತೆರಿಗೆಯನ್ನು
ಸಂಗ್ರಹಿಸುವುದು ಮೂಲಭೂತ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ವಾದಿಸಿದ್ದಾರೆ.
ಸರಕಾರವು
ಇಡಬ್ಲುಎಸ್ ಮೀಸಲಾತಿಯಲ್ಲಿ ಸೇರ್ಪಡೆಗೆ ಎಂಟು ಲ.ರೂ.ಗೂ ಕಡಿಮೆ ಒಟ್ಟು ವಾರ್ಷಿಕ
ಆದಾಯವನ್ನು ನಿಗದಿಗೊಳಿಸಿರುವುದರಿಂದ ಆದಾಯ ತೆರಿಗೆಗಾಗಿ ಆದಾಯ ಸ್ತರವನ್ನೂ
ಹೆಚ್ಚಿಸಬೇಕು. ಸಮಾಜದ ಇತರ ವರ್ಗಗಳಿಗೂ ಇದೇ ಅಳತೆಗೋಲನ್ನು ಅನ್ವಯಿಸಬೇಕು. ವಾರ್ಷಿಕ
7,99,999 ರೂ.ವರೆಗೆ ಆದಾಯ ಹೊಂದಿರುವ ವ್ಯಕ್ತಿಯಿಂದ ಸರಕಾರವು ಆದಾಯ ತೆರಿಗೆಯನ್ನು
ಸಂಗ್ರಹಿಸಬಾರದು. ಇಂತಹವರಿಂದ ತೆರಿಗೆ ವಸೂಲು ಮಾಡುವುದರಲ್ಲಿ ಯಾವುದೇ ವೈಚಾರಿಕತೆ
ಮತ್ತು ಸಮಾನತೆ ಇಲ್ಲ ಎಂದು ಸೀನಿವಾಸನ್ ತನ್ನ ಅರ್ಜಿಯಲ್ಲಿ ಪ್ರತಿಪಾದಿಸಿದ್ದಾರೆ.
ಕೇಂದ್ರ ಕಾನೂನು ಮತ್ತು ನ್ಯಾಯ,ಹಣಕಾಸು,ಸಿಬ್ಬಂದಿ,ಸಾರ್ವಜನಿಕ ಕುಂದುಕೊರತೆಗಳು ಮತ್ತು
ಪಿಂಚಣಿ ಸಚಿವಾಲಯಗಳಿಗೆ ನೋಟಿಸ್ ಹೊರಡಿಸಿರುವ ನ್ಯಾಯಮೂರ್ತಿಗಳಾದ ಆರ್.ಮಹಾದೇವನ್ ಮತ್ತು
ನಾರಾಯಣ ಪ್ರಸಾದ ಅವರ ಪೀಠವು ವಿಚಾರಣೆಯನ್ನು ನಾಲ್ಕು ವಾರಗಳ ಕಾಲ ಮುಂದೂಡಿದೆ.