ಮಾಲೆ: ಮಾಲ್ಡೀವ್ಸ್ ರಾಜಧಾನಿ ಮಾಲೆಯಲ್ಲಿರುವ ವಿದೇಶಿ ಕಾರ್ಮಿಕರ ಇಕ್ಕಟ್ಟಾದ ವಸತಿಗೃಹಗಳಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 9 ಮಂದಿ ಭಾರತೀಯರು ಸೇರಿದಂತೆ 10 ಮಂದಿ ದುರಂತ ಸಾವಿಗೀಡಾಗಿರುವುದಾಗಿ ಅಗ್ನಿಶಾಮಕದಳದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಾಲ್ಡೀವ್ಸ್ ಪ್ರವಾಸಿಗರ ಸ್ವರ್ಗವಾಗಿದ್ದು, ಅತಿ ಹೆಚ್ಚು ಸೆಲೆಬ್ರಿಟಿಗಳು ಭೇಟಿ ನೀಡುವ ತಾಣ ಇದಾಗಿದೆ. ದ್ವೀಪಸಮೂಹದ ಮಾಲ್ಡೀವ್ಸ್ ರಾಜಧಾನಿ ಮಾಲೆ, ವಿಶ್ವದ ಅತ್ಯಂತ ಜನನಿಬಿಡ ನಗರಗಳಲ್ಲಿ ಒಂದಾಗಿದೆ.
ಅಗ್ನಿ ಅವಘಡದಿಂದ ಸಂಪೂರ್ಣ ನಾಶವಾಗಿರುವ ಕಟ್ಟಡದ ಮೇಲಿನ ಮಹಡಿಯಿಂದ 10 ಮೃತದೇಹಗಳನ್ನು ಹೊರಕ್ಕೆ ತೆಗೆಯಲಾಗಿದೆ. ಕಟ್ಟಡದ ನೆಲಮಹಡಿಯಲ್ಲಿರುವ ವಾಹನ ರಿಪೇರಿ ಗ್ಯಾರೇಜ್ನಲ್ಲಿ ಬೆಂಕಿ ಹೊತ್ತಿಕೊಂಡಿತು ಎಂದು ಹೇಳಲಾಗಿದೆ.
ನಾವು 10 ಶವಗಳನ್ನು ಪತ್ತೆಹಚ್ಚಿದ್ದೇವೆ ಎಂದು ಅಗ್ನಿಶಾಮಕ ಸೇವೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ, ಬೆಂಕಿಯನ್ನು ನಂದಿಸಲು ಸುಮಾರು ನಾಲ್ಕು ಗಂಟೆಗಳ ಸಮಯ ತೆಗೆದುಕೊಂಡಿತು ಎಂದಿದ್ದಾರೆ.
ಮೃತರಲ್ಲಿ ಒಂಬತ್ತು ಭಾರತೀಯರು ಮತ್ತು ಬಾಂಗ್ಲಾದೇಶ ಪ್ರಜೆಯೂ ಸೇರಿದ್ದಾರೆ ಎಂದು ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘಟನೆಯ ಬೆನ್ನಲ್ಲೇ ಮಾಲ್ಡೀವಿಯನ್ ರಾಜಕೀಯ ಪಕ್ಷಗಳು ವಿದೇಶಿ ಕಾರ್ಮಿಕರ ಪರಿಸ್ಥಿತಿಗಳನ್ನು ನೋಡಿ ಸರ್ಕಾರವನ್ನು ಟೀಕಿಸಿವೆ.