ನವದೆಹಲಿ:ಈ ವರ್ಷದ ಜನವರಿಯಿಂದ ಜೂನ್ ತಿಂಗಳ ನಡುವೆ ಭಾರತ ಸರಕಾರವು ತನ್ನಿಂದ ಕೋರಿದ್ದ ಬಳಕೆದಾರರ ದತ್ತಾಂಶ (ಯೂಸರ್‌ಡೇಟಾ)ದ ಪ್ರಮಾಣವು ಜಗತ್ತಿನಲ್ಲೇ ದ್ವಿತೀಯ ಗರಿಷ್ಠವಾಗಿದೆ ಎಂದು ಮೆಟಾ ಕಂಪೆನಿ (Meta Company)ಮಂಗಳವಾರ ತಿಳಿಸಿದೆ.
ಅಮೆರಿಕವು ಅತ್ಯಧಿಕ ಸಂಖ್ಯೆಯ ಬಳಕೆದಾರರ ದತ್ತಾಂಶಕ್ಕಾಗಿ ಮನವಿ ಸಲ್ಲಿಸಿದ ರಾಷ್ಟ್ರವಾಗಿದೆ . 2022ನೇ ಇಸವಿಯ ಮೊದಲ ಆರು ತಿಂಗಳುಗಳಲ್ಲಿ ಭಾರತ ಸರಕಾರವು 91,159 ಬಳಕೆದಾರರ ಮಾಹಿತಿಯನ್ನು ಕೋರಿ 55,497 ಮನವಿಗಳನ್ನು ಸಲ್ಲಿಸಿತ್ತು . ಈ ಪೈಕಿ 36,955 ಮನವಿಗಳ ಕುರಿತಾದ ದತ್ತಾಂಶಗಳನ್ನು ಒದಗಿಸಲಾಗಿದೆಯೆಂದು ಅದು ತಿಳಿಸಿದೆ.
ಮೆಟಾ ಸಂಸ್ಥೆಯು ಅತ್ಯಂತ ಜನಪ್ರಿಯ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಮ್(Facebook and Instagram)ನ ಪೋಷಕ ಸಂಸ್ಥೆಯಾಗಿದೆ. ಕಾನೂನು ಜಾರಿ ಸಂಸ್ಥೆಗಳಿಗೆ ಯಾವುದೇ ಮಾಹಿತಿ ಬೇಕಿದ್ದಲ್ಲಿ ಯಾವುದೇ ವಿಳಂಬವಿಲ್ಲದೆ ಅವುಗಳಿಗೆ ಒದಗಿಸಲಾಗುವುದೆಂದು ಮೆಟಾ ತಿಳಿಸಿದೆ. ಇಂತಹವುಗಳು ''ವಿಷಯಗಳ ತುರ್ತು ಬಹಿರಂಗಕ್ಕಾಗಿನ ಮನವಿಗಳ' ಶ್ರೇಣಿಗೆ ಸೇರ್ಪಡೆಗೊಳ್ಳುತ್ತವೆ ಎಂದು ಮೆಟಾ ತಿಳಿಸಿದೆ.
2000ರ ಮಾಹಿತಿ ಹಕ್ಕು ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69 ಎ ಅನ್ನು ಉಲ್ಲಂಘಿಸಿದಕ್ಕಾಗಿ ಇಲೆಕ್ಟ್ರಾನಿಕ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯದ ನಿರ್ದೇಶನದ ಮೇರೆಗೆ ಮೆಟಾ ಕಂಪೆನಿಯು ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ಗಳ ಪೇಜ್‌ಗಳು, ಖಾತೆಗಳು ಹಾಗೂ ಪೋಸ್ಟ್‌ಗಳು ಸೇರಿದಂತೆ 597 ಸಾಧನಗಳನ್ನು ನಿರ್ಬಂಧಿಸಿದೆ ಎಂದು ವರದಿ ತಿಳಿಸಿದೆ. ಚುನಾವಣಾ ಆಯೋಗ ನೀಡಿದ ದೂರಿನ ಹಿನ್ನೆಲೆಯಲ್ಲಿ 2021ರ ಮಾಹಿತಿ ತಂತ್ರಜ್ಞಾನ (ಮಾಧ್ಯಮಿಕ ಮಾರ್ಗದರ್ಶಿ ಸೂತ್ರಗಳ ಹಾಗೂ ಡಿಜಿಟಲ್ ಮೆಡಿಯಾ ಎಥಿಕ್ಸ್ ಕೋಡ್) ನಿಯಮಗಳು 2021ರಡಿ 6 ವಿಷಯಗಳನ್ನು ಹಾಗೂ ಹಾಗೂ ಭಾರತೀಯ ದಂಡ ಸಂಹಿತೆ ಕಾಯ್ದೆಯಡಿ 23 ವಿಷಯಗಳನ್ನು ನಿರ್ಬಂಧಿಸಲಾಗಿದೆ ಎಂದು ಮೆಟಾ ತಿಳಿಸಿದೆ.
ಇತರ ಕೋರ್ಟ್ ಆದೇಶಗಳ ಹಿನ್ನೆಲೆಯಲ್ಲಿ 71 ವಿಷಯಗಳು, ಐಪಿ ಉಲ್ಲಂಘನೆಗಾಗಿ 13 ವಿಷಯಗಳು ಹಾಗೂ ಮಾನಹಾನಿಕರವಾದ ಖಾಸಗಿ ವರದಿಗಳಿಗೆ ಪ್ರತಿಕ್ರಿಯೆಯಾಗಿ ಎರಡು ವಿಷಯಗಳನ್ನು ನಿರ್ಬಂಧಿಸಲಾಗಿದೆ ಎಂದು ಮೆಟಾ ತಿಳಿಸಿದೆ.
ಭಾರತ ಸರಕಾರವು 2021ರ ಮೊದಲಾರ್ಧ ಹಾಗೂ ದ್ವಿತೀಯಾರ್ಧದ ಅವಧಿಗಿಂತ ಹೆಚ್ಚಾಗಿ ಈ ವರ್ಷದ ಮೊದಲಾರ್ಧದಲ್ಲೇ ಹೆಚ್ಚು ದತ್ತಾಂಶ ಮನವಿಗಳನ್ನು ಸಲ್ಲಿಸಿತ್ತು ಎಂದು ಭಾರತ ಸರಕಾರ ತಿಳಿಸಿದೆ.
ಅಮೆರಿಕದಲ್ಲಿ ಮೆಟಾ ಕಂಪೆನಿಯು 69,363 ಮನವಿಗಳನ್ನು ಸ್ವೀಕರಿಸಿದ್ದು, ಇದು 2021ರ ದ್ವಿತೀಯಾರ್ಧಕ್ಕಿಂತ ಶೇ.15.6 ಶೇಕಡದಷ್ಟು ಅಧಿಕವಾಗಿತ್ತು.
ಜಾಗತಿಕವಾಗಿ ಮೆಟಾ ಕಂಪೆನಿಯು ಒಟ್ಟು 4.12 ಲಕ್ಷ ಬಳಕೆದಾರರ ದತ್ತಾಂಶಗಳಿಗಾಗಿ ಮನವಿಗಳನ್ನು ಸ್ವೀಕರಿಸಿತ್ತು. ಈ ಪೈಕಿ 76.10 ಶೇಕಡದಷ್ಟು ಮನವಿಗಳಿಗೆ ಕೆಲವು ದತ್ತಾಂಶಗಳನ್ನು ಒದಗಿಸಲಾಗಿತ್ತು ಎಂದು ಮೆಟಾ ವರದಿ ತಿಳಿಸಿದೆ.