ಕೊಹಿಮಾ: ನಾಗಾಲ್ಯಾಂಡ್‌ನ ಮೋನ್ ಜಿಲ್ಲೆಯಲ್ಲಿರುವ ಜೈಲಿನಿಂದ ಕನಿಷ್ಠ 9 ಕೈದಿಗಳು ಪರಾರಿಯಾಗಿದ್ದು, ಅವರಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸರು ಭಾನುವಾರ ತಿಳಿಸಿದರು.
'ತಪ್ಪಿಸಿಕೊಂಡವರಲ್ಲಿ ವಿಚಾರಣಾಧೀನ ಕೈದಿಗಳು ಹಾಗೂ ಕೊಲೆ ಅಪರಾಧಿಗಳೂ ಸೇರಿದ್ದಾರೆ.
ತಮ್ಮ ಕೋಣೆಯ ಬೀಗದ ಕೈಗಳನ್ನು ಹೇಗೋ ಪಡೆದುಕೊಂಡು ಅವರೆಲ್ಲ ಪರಾರಿಯಾಗಿದ್ದಾರೆ' ಎಂದೂ ಅವರು ಹೇಳಿದರು.
'ಈ ಕುರಿತು ಮೋನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ. ಸಂಬಂಧಪಟ್ಟ ಇಲಾಖೆಗಳಿಗೂ ಎಚ್ಚರಿಕೆ ನೀಡಲಾಗಿದೆ. ಕೈದಿಗಳೇನಾದರೂ ಅವರ ಊರಿಗೆ ಹೋಗಿದ್ದರೆ ತಮಗೆ ಮಾಹಿತಿ ನೀಡುವಂತೆ ಅಲ್ಲಿನ ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ತಿಳಿಸಲಾಗಿದೆ' ಎಂದರು.