ಮುಂಬೈ: ಕಾಲ್ ಸೆಂಟರ್ ಉದ್ಯೋಗಿ ಶ್ರದ್ಧಾ ವಾಲ್ಕರ್ ನನ್ನು ಅಮಾನುಷವಾಗಿ ಹತ್ಯೆ ಮಾಡಿದ ಲಿವ್ ಇನ್ ರಿಲೇಷನ್ ಷಿಪ್ ಗೆಳೆಯ ಆಫ್ತಾಬ್ ಪೂನವಾಲನನ್ನು ಈ ತಿಂಗಳ ಆರಂಭದಲ್ಲಿ ವಿಚಾರಣೆಗೊಳಪಡಿಸಿದಾಗ ಆತನ ಮುಖದಲ್ಲಿ ಆತ್ಮವಿಶ್ವಾಸವಿತ್ತೇ ಹೊರತು ಪಶ್ಚಾತ್ತಾಪ ಭಾವನೆ ಒಂದಿನಿತೂ ಕಂಡುಬಂದಿರಲಿಲ್ಲ ಎಂದು ಮಹಾರಾಷ್ಟ್ರದಲ್ಲಿ ಮಣಿಕ್ ಪುರ ಪೊಲೀಸರು ಹೇಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶ್ರದ್ಧಾ ವಾಲ್ಕರ್ ಕುಟುಂಬಸ್ಥರು ಆಕೆಯನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಸುಳಿವು ಸಿಗದಿದದ್ದಾಗ ನಾಪತ್ತೆ ಪ್ರಕರಣವನ್ನು ದಾಖಲಿಸಿದ್ದರು. ಆಗ ಪಲ್ಗರ್ ನ ವಾಸೈಯ ಮಣಿಕ್ ಪುರ ಪೊಲೀಸರು ಪೂನಾವಾಲನನ್ನು ಕಳೆದ ತಿಂಗಳು ಮತ್ತು ಮೊನ್ನೆ ನವೆಂಬರ್ 3ರಂದು ಎರಡು ಬಾರಿ ವಿಚಾರಣೆಗೆ ಕರೆದಿದ್ದರು. ಈ ವೇಳೆ ಪೂನಾವಾಲ ಶ್ರದ್ಧಾ ತನ್ನನ್ನು ತೊರೆದು ಹೋಗಿದ್ದು, ತಾವಿಬ್ಬರೂ ಒಟ್ಟಿಗೆ ವಾಸಿಸುತ್ತಿಲ್ಲ ಎಂದು ಹೇಳಿಕೊಂಡಿದ್ದ ಎಂದು ಸಹಾಯಕ ಪೊಲೀಸ್ ಆಯುಕ್ತ ಸಂಪತ್ ರಾವ್ ಪಾಟೀಲ್ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದರು.
ಕಳೆದ ಮೇ ತಿಂಗಳವರೆಗೆ ವಾಸೈಯಲ್ಲಿ ವಾಸಿಸುತ್ತಿದ್ದ ಪೂನಾವಾಲನನ್ನು ದೆಹಲಿ ಪೊಲೀಸರು ಶ್ರದ್ಧಾ ಕೊಲೆ ಪ್ರಕರಣ ಸಂಬಂಧ ಬಂಧಿಸಿದ್ದಾರೆ. ಅಕ್ಟೋಬರ್‌ನಲ್ಲಿ ಮೊದಲ ಬಾರಿಗೆ ಪೂನಾವಾಲಾನನ್ನು ವಿಚಾರಣೆಗೆ ಕರೆಯಲಾಗಿತ್ತು. ಆ ವೇಳೆ ವಿಚಾರಣೆ ಮಾಡಿ ಕಳುಹಿಸಲಾಗಿತ್ತು. ಬಳಿಕ ನವೆಂಬರ್ 3ರಂದು ಮತ್ತೆ ಕರೆದು ಪೊಲೀಸರು ಎರಡು ಪುಟಗಳ ಹೇಳಿಕೆ ದಾಖಲಿಸಿಕೊಂಡಿದ್ದರು. ಎರಡೂ ಬಾರಿ ಆತ ತುಂಬಾ ಆತ್ಮವಿಶ್ವಾಸದಿಂದಿದ್ದು, ಆತನ ಮುಖದಲ್ಲಿ ಯಾವುದೇ ಪಶ್ಚಾತ್ತಾಪ ಇರಲಿಲ್ಲ ಎಂದು ಪಾಟೀಲ್ ಹೇಳುತ್ತಾರೆ.
ಕಳೆದ ತಿಂಗಳು ಅಧಿಕಾರಿಗಳು ದೆಹಲಿಯ ಮೆಹ್ರೌಲಿ ಪೊಲೀಸ್ ಠಾಣೆಗೆ ಭೇಟಿ ನೀಡಿ ಪೂನಾವಾಲಾನನ್ನು ವಿಚಾರಣೆಗೆ ಒಳಪಡಿಸಿದರು. ಆ ವೇಳೆ ಕೂಡ ಪೂನಾವಾಲ ತನ್ನ ಹಿಂದಿನ ಹೇಳಿಕೆಯನ್ನೇ ಪುನರಾವರ್ತಿಸಿದ್ದ.
ನಂತರ ಪೊಲೀಸರು ದೆಹಲಿಯ ಪೊಲೀಸ್ ಠಾಣೆಯಲ್ಲಿ ಗಂಟೆಗಳ ಕಾಲ ಆತನನ್ನು ವಿಚಾರಣೆಗೊಳಪಡಿಸಿದ್ದರು. ಶ್ರದ್ಧಾ ವಾಕರ್ ನ ಆಪ್ತ ಸ್ನೇಹಿತ ರಜತ್ ಶುಕ್ಲಾ ಪೂನಾವಾಲ ಆಕೆಯನ್ನು ಮತಾಂತರಕ್ಕೆ ಒತ್ತಾಯಿಸಿರುವ ಸಾಧ್ಯತೆಯಿದೆ. ಪೂನಾವಾಲ ಸಾಮಾನ್ಯ ವ್ಯಕ್ತಿಯಲ್ಲ. ಲವ್ ಜಿಹಾದ್, ಭಯೋತ್ಪಾದನೆ ಚಟುವಟಿಕೆಗಳಲ್ಲಿ ನಿರತನಾಗಿರಬಹುದು. ಪ್ರಕರಣದ ತನಿಖೆ ನಡೆದು ಸತ್ಯಾಂಶ ಹೊರಬರಬೇಕು. ಎಂದು ಒತ್ತಾಯಿಸುತ್ತಾರೆ.
ತಾನು ಪ್ರೀತಿಸಿದ ವ್ಯಕ್ತಿಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ, ಫ್ರಿಡ್ಜ್‌ನಲ್ಲಿಟ್ಟು ಕಾಡಿನಲ್ಲಿ ಎಸೆಯುವಂತಹ ಘೋರ ಅಪರಾಧ ಎಸಗಿದ ಪೂನಾವಾಲಾ ಪ್ರೇಮಿಯಂತೆ ಕಾಣುವುದಿಲ್ಲ. ಪೂನಾವಾಲಾ-ಶ್ರದ್ಧಾ ವಾಕರ್ ಲಿವ್-ಇನ್ ಸಂಬಂಧದಲ್ಲಿ 2019ರಿಂದ ಇದ್ದರು. ಅವರಿಬ್ಬರೂ 2018 ರಿಂದ ಸಂಬಂಧದಲ್ಲಿದ್ದಂತೆ ತೋರುತ್ತಿದೆ, ಆದರೆ ಅದನ್ನು ರಹಸ್ಯವಾಗಿಟ್ಟಿದ್ದರು ಎನ್ನುತ್ತಾರೆ ಶುಕ್ಲಾ.