ನವದೆಹಲಿ: ದೇಶದ್ರೋಹಕ್ಕೆ ಸಂಬಂಧಿಸಿದ ಸೆಕ್ಷನ್ 124(ಎ)ಗೆ ಈ ವರ್ಷದ ಮೇ 11ರಂದು ತಡೆ ನೀಡಿದ್ದ ಸುಪ್ರೀಂ ಕೋರ್ಟ್, ಬ್ರಿಟಿಷರ ಕಾಲದ ಈ ಸೆಕ್ಷನ್ ಕುರಿತು ಮರುಪರಿಶೀಲನೆ ನಡೆಸಲು ಕೇಂದ್ರ ಸರ್ಕಾರಕ್ಕೆ ಸೋಮವಾರ ಹೆಚ್ಚುವರಿ ಕಾಲಾವಕಾಶ ಮಂಜೂರು ಮಾಡಿದೆ.
'ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರ ಏನಾದರೂ ತೀರ್ಮಾನ ತೆಗೆದುಕೊಳ್ಳಬಹುದು. ಹೀಗಾಗಿ ಹೆಚ್ಚುವರಿ ಸಮಯಾವಕಾಶ ನೀಡಿ' ಎಂದು ಅಟಾರ್ನಿ ಜನರಲ್ ಆರ್.ವೆಂಕಟರಮಣಿ ಅವರು ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್, ನ್ಯಾಯಮೂರ್ತಿಗಳಾದ ಎಸ್.ರವೀಂದ್ರ ಭಟ್ ಮತ್ತು ಬೇಲಾ ಎಂ.ತ್ರಿವೇದಿ ಅವರನ್ನೊಳಗೊಂಡ ನ್ಯಾಯಾಪೀಠಕ್ಕೆ ಮನವಿ ಮಾಡಿದರು.
'ನ್ಯಾಯಾಲಯ ಈಗಾಗಲೇ ಮಧ್ಯಂತರ ತೀರ್ಪು ಪ್ರಕಟಿಸಿರುವುದರಿಂದ ಈ ವಿಚಾರವಾಗಿ ಆತಂಕಪಡುವ ಅಗತ್ಯವೇನಿಲ್ಲ. ಸಂಸತ್ತಿನ ಚಳಿಗಾಲದ ಅಧಿವೇಶನದ ಬಳಿಕ ಈ ಕುರಿತ ವಿಚಾರಣೆ ನಡೆಸುವುದು ಸೂಕ್ತ' ಎಂದೂ ಅವರು ಪೀಠಕ್ಕೆ ತಿಳಿಸಿದರು.
ಅವರ ಮನವಿ ಪುರಸ್ಕರಿಸಿದ ನ್ಯಾಯಪೀಠವು 2023ರ ಜನವರಿಗೆ ವಿಚಾರಣೆ ಮುಂದೂಡಿತು.
124 (ಎ) ಸೆಕ್ಷನ್ ಅಡಿಯಲ್ಲಿ ಹೊಸದಾಗಿ ಯಾವುದೇ ಎಫ್‌ಐಆರ್ ದಾಖಲಿಸದಂತೆ ಹಾಗೂ ಈಗಾಗಲೇ ದಾಖಲಾಗಿರುವ ಪ್ರಕರಣಗಳ ತನಿಖೆಯನ್ನು ತಡೆಹಿಡಿಯುವಂತೆ ನಿರ್ದೇಶನ ನೀಡಲಾಗಿದೆಯೇ ಎಂದು ನ್ಯಾಯಪೀಠವು ಕೇಂದ್ರ ಸರ್ಕಾರವನ್ನು ಕೇಳಿತು.
'ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಈ ಸಂಬಂಧ ನಿರ್ದೇಶನ ನೀಡಲಾಗಿದೆ' ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ನ್ಯಾಯಪೀಠಕ್ಕೆ ತಿಳಿಸಿದರು.