ತಿರುವನಂತಪುರ: ಬಿಜೆಪಿಯೇತರ ಸರ್ಕಾರವಿರುವ ರಾಜ್ಯಗಳ ರಾಜ್ಯಪಾಲರನ್ನು ಅಲ್ಲಿನ ಸರ್ಕಾರಗಳ ವಿರುದ್ಧ ಬಿಜೆಪಿಯು ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿ ನವೆಂಬರ್ 15ರಂದು ಇಲ್ಲಿನ ರಾಜಭವನಕ್ಕೆ ಹಮ್ಮಿಕೊಂಡಿರುವ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗಿಯಾಗುವಂತೆ ಇತರ ವಿರೋಧ ಪಕ್ಷಗಳನ್ನೂ ಸೆಳೆಯಲು ಸಿಪಿಎಂ ಯತ್ನಿಸುತ್ತಿದೆ.
ಕೇರಳದ ಆಡಳಿತಾರೂಢ ಎಲ್‌ಡಿಎಫ್ ಆಯೋಜಿಸಿರುವ ಪ್ರತಿಭಟನಾ ಮೆರವಣಿಗೆಗೆ ಪಕ್ಷದ ಪ್ರತಿನಿಧಿಗಳನ್ನು ಕಳುಹಿಸಲು ತಮಿಳುನಾಡಿನ ಡಿಎಂಕೆ ಈಗಾಗಲೇ ತೀರ್ಮಾನಿಸಿದೆ. ಡಿಎಂಕೆ ರಾಜ್ಯಸಭಾ ಸದಸ್ಯ ತಿರುಚಿ ಶಿವ ಅವರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವರು ಎಂದು ಮೂಲಗಳು ತಿಳಿಸಿವೆ.
ತಮಿಳುನಾಡಿನ ರಾಜ್ಯಪಾಲ ಆರ್.ಎನ್.ರವಿ ಅವರನ್ನು ಕೂಡಲೇ ವಾಪಸ್ ಕರೆಸಿಕೊಳ್ಳಬೇಕೆಂದು ಆಗ್ರಹಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆಯಲು ಡಿಎಂಕೆ ಕೂಡ ಈಚೆಗೆ ನಿರ್ಧರಿಸಿತ್ತು.
ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ಅವರು ಪ್ರತಿಭಟನಾ ಮೆರವಣಿಯನ್ನು ಉದ್ಘಾಟಿಸುವರು. ರಾಜ್ಯಪಾಲರ ವಿರುದ್ಧ ವಿರೋಧ ಪಕ್ಷಗಳು ಒಗ್ಗಟ್ಟು ಪ್ರದರ್ಶಿಸುವ ನಿಟ್ಟಿನಲ್ಲಿ ಯೆಚೂರಿ ಅವರು ಈಚೆಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಜೊತೆ ಮಾತುಕತೆ ನಡೆಸಿದ್ದರು. ಆದರೆ ಕೇರಳದಲ್ಲಿ ಪ್ರಮುಖ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಮೂಲಗಳು ತಿಳಿಸಿವೆ.
ಪ್ರತಿಭಟನೆಯಲ್ಲಿ ಒಂದು ಲಕ್ಷ ಮಂದಿ ಕಾರ್ಯಕರ್ತರು ಭಾಗವಹಿಸುವರು ಎಂದು ಎಲ್‌ಡಿಎಫ್ ಹೇಳಿದೆ.