ಕೊಚ್ಚಿ: ಇಳಂತೂರು ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸೆಂಬರ್ ಮೊದಲ ವಾರದಲ್ಲಿ ಚಾರ್ಜ್ ಶೀಟ್ ಸಲ್ಲಿಸಲು ತನಿಖಾ ತಂಡ ಸಿದ್ದತೆ ನಡೆಸಿದೆ.
ಪ್ರಕರಣದ ಎಲ್ಲಾ ಮೂವರು ಆರೋಪಿಗಳ ಬಂಧನವನ್ನು ಅಕ್ಟೋಬರ್ 12 ರಂದು ದಾಖಲಿಸಲಾಗಿದೆ. 90 ದಿನಗಳೊಳಗೆ ಚಾರ್ಜ್ ಶೀಟ್ ಸಲ್ಲಿಸದಿದ್ದರೆ ಆರೋಪಿಗಳಿಗೆ ಸ್ವಾಭಾವಿಕ ಜಾಮೀನು ಸಿಗುವ ಸಾಧ್ಯತೆಯನ್ನು ತಪ್ಪಿಸುವ ಉದ್ದೇಶದಿಂದ ತ್ವರಿತ ಚಾರ್ಜ್ ಶೀಟ್ ಸಲ್ಲಿಸುವ ಸಿದ್ದತೆ ಭರದಿಂದ ಸಾಗಿದೆ.
ಇದೇ ವೇಳೆ, ಪ್ರಕರಣದಲ್ಲಿ ನಿರ್ಣಾಯಕವಾದ ಕೆಲವು ಘಟನೆಗಳ ವೈಜ್ಞಾನಿಕ ಪುರಾವೆಗಳು ಸಿಗದಿರುವುದು ಪೋಲೀಸರ ಮುಂದಿರುವ ಪ್ರಮುಖ ಸವಾಲು. ಆರೋಪಿಗಳು ಮೂರನೆಯದೊಂದು ಕೊಲೆ ಮಾಡಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆ ಪೋಲೀಸರಿಗೆ ಸಿಕ್ಕಿಲ್ಲ.
ತನಿಖಾ ತಂಡ ಆರೋಪಿಗಳನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿ ಸಾಕ್ಷ್ಯಾಧಾರಗಳನ್ನು ಪಡೆದುಕೊಂಡಿದೆ. ನಂತರ ಆರೋಪಿಗಳನ್ನು ಪೆರುಂಬವೂರು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನವೆಂಬರ್ 19 ರವರೆಗೆ ರಿಮಾಂಡ್ ವಿಧಿಸಿದೆ. ಮೊದಲ ಆರೋಪಿ ಶಫಿ, ಎರಡನೇ ಆರೋಪಿ ಭಗವಲ್‍ಸಿಂಗ್ ರನ್ನು ವಿಯೂರು ಹೈ ಸೆಕ್ಯುರಿಟಿ ಜೈಲಿಗೆ ಮತ್ತು ಮೂರನೇ ಆರೋಪಿ ಲೈಲಾಳನ್ನು ಕಾಕ್ಕನಾಡು ಜೈಲಿಗೆ ಸ್ಥಳಾಂತರಿಸಲಾಗಿದೆ.
ಪ್ರಕರಣದ ಸಾಕ್ಷ್ಯಾಧಾರಗಳು ಪೂರ್ಣಗೊಂಡ ನಂತರ ಆರೋಪಿಯು ಜಾಮೀನು ಅರ್ಜಿಯನ್ನು ಸಲ್ಲಿಸುವ ಪ್ರಕ್ರಿಯೆಯಲ್ಲಿದ್ದಾರೆ. ಏತನ್ಮಧ್ಯೆ, ತನಿಖಾ ತಂಡವು ನಿರ್ಣಾಯಕ ಡಿಎನ್ಎ ಪರೀಕ್ಷೆಯ ಫಲಿತಾಂಶಗಳಿಗಾಗಿ ಕಾಯುತ್ತಿದೆ. ನವೆಂಬರ್ 28 ರೊಳಗೆ ಫಲಿತಾಂಶ ಲಭ್ಯವಾಗುವ ನಿರೀಕ್ಷೆಯಿದೆ. ಇದು ಲಭಿಸಿದರೆ ಮಾತ್ರ ಚಾರ್ಜ್ ಶೀಟ್ ಪೂರ್ಣವಾಗಲಿದೆ.
ಇಳಂತೂರು ಪ್ರಕರಣದ ಚಾರ್ಜ್ ಶೀಟ್ ಸಿದ್ಧತೆಯಲ್ಲಿ ಪೋಲೀಸರು: ಡಿಸೆಂಬರ್ ಮೊದಲ ವಾರ ಸಲ್ಲಿಕೆ ಸಾಧ್ಯತೆ
0
ನವೆಂಬರ್ 08, 2022