ನವದೆಹಲಿ:ದಲಿತ ಕ್ರಿಶ್ಚಿಯನ್ನರು ಮತ್ತು ದಲಿತ ಮುಸ್ಲಿಮರನ್ನು ಪರಿಶಿಷ್ಟ ಜಾತಿಗಳ ಪಟ್ಟಿಗೆ ಸೇರಿಸುವ ಪ್ರಕರಣದ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ಪೀಠದ ಮುಂದೆ ಕೇಂದ್ರ ಸರ್ಕಾರ ಅಫಿಡವಿಟ್ ಸಲ್ಲಿಸಿದ್ದು, ದಲಿತ ಕ್ರಿಶ್ಚಿಯನ್, ಮುಸ್ಲಿಮರನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸುವುದರಿಂದ, ಯಾವ ಸಮುದಾಯಗಳನ್ನು ಪರಿಶಿಷ್ಟ ಜಾತಿ ಎಂದು ವರ್ಗೀಕರಿಸಬಹುದು ಎಂಬುದನ್ನು ನಿರ್ಧರಿಸುವ ಪ್ರಸ್ತುತ ಮಾನದಂಡಗಳ ಸ್ಪಷ್ಟತೆಗೆ ಕೊರತೆಯಾಗುತ್ತದೆ ಎಂದಿದೆ.
ದಲಿತ ಕ್ರಿಶ್ಚಿಯನ್ನರು ಮತ್ತು ದಲಿತ ಮುಸ್ಲಿಮರನ್ನು ಪಟ್ಟಿಯಿಂದ ಹೊರಗಿಡುವುದನ್ನು ತನ್ನ ವಾದಗಳಲ್ಲಿ ಕೇಂದ್ರ ಸಮರ್ಥಿಸಿಕೊಂಡಿದ್ದು, ತನ್ನ ವಾದಗಳಲ್ಲಿ ಸಿಖ್ ಮತ್ತು ಬೌದ್ಧ ಧರ್ಮದಿಂದ ಭಿನ್ನವಾಗಿ ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮಗಳಿಗಿರುವ "ವಿದೇಶಿ" ಮೂಲಗಳನ್ನು ಪರೋಕ್ಷವಾಗಿ ಹೇಳಿದೆ ಎಂದು TheHindu.com ವರದಿ ಮಾಡಿದೆ.
ಅಕ್ಟೋಬರ್‌ನಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಮೂಲಕ ಸಲ್ಲಿಸಿದ ಅಫಿಡವಿಟ್‌ನಲ್ಲಿ, ಹಿಂದೂ ಧರ್ಮ, ಸಿಖ್ ಧರ್ಮ ಮತ್ತು ಬೌದ್ಧ ಧರ್ಮವನ್ನು ಅನುಸರಿಸುವ ಪರಿಶಿಷ್ಟ ಜಾತಿಗಳು ಮತ್ತು ಇತರ ಧರ್ಮಗಳನ್ನು ಆಚರಿಸುವ ಪರಿಶಿಷ್ಟ ಜಾತಿಗಳ ನಡುವಿನ "ಗ್ರಹಿಕೆಯ ವ್ಯತ್ಯಾಸ" ವನ್ನು ಸರ್ಕಾರವು ಸಮರ್ಥಿಸಿದೆ.
"ಕ್ರಿಶ್ಚಿಯನ್ ಧರ್ಮ ಮತ್ತು ಇಸ್ಲಾಂ ಧರ್ಮಗಳು ಭಾರತೀಯ ಧರ್ಮಗಳಲ್ಲ ಮತ್ತು ಭಾರತದಲ್ಲಿ ಕ್ರಿಶ್ಚಿಯನ್ ಮತ್ತು ಮುಸ್ಲಿಂ ಜನಸಂಖ್ಯೆಯ ಸೃಷ್ಟಿಗೆ ವಿದೇಶಿ ಕೊಡುಗೆಗಳಿವೆ ಎಂಬ ವಾದವನ್ನು ಕೇಂದ್ರ ಸರ್ಕಾರದ ವಾದವು ಸೂಚಿಸುತ್ತದೆ' ಎಂದು ದಿ ಹಿಂದೂ ತನ್ನ ವರದಿಯಲ್ಲಿ ಹೇಳಿದೆ.
ಸರ್ಕಾರ ಸಲ್ಲಿಸಿರುವ ಅಫದವಿಟ್‌ನಲ್ಲಿ ವಿರೋಧಾಭಾಸಗಳಿದ್ದು, ಒಂದು ಕಡೆ, 'ಕೆಲವು ಹಿಂದೂ ಜಾತಿಗಳ ಆರ್ಥಿಕ ಮತ್ತು ಸಾಮಾಜಿಕ ಹಿಂದುಳಿದಿರುವಿಕೆಗೆ ಕಾರಣವಾಗುವ ಅಸ್ಪೃಶ್ಯತೆಯ ದಬ್ಬಾಳಿಕೆಯ ವ್ಯವಸ್ಥೆಯು ಕ್ರಿಶ್ಚಿಯನ್ ಅಥವಾ ಇಸ್ಲಾಮಿಕ್ ಸಮಾಜದಲ್ಲಿ ಪ್ರಚಲಿತವಾಗಿಲ್ಲ ಎಂಬ ಕಾರಣಕ್ಕಾಗಿ ಕ್ರಿಶ್ಚಿಯನ್ ಧರ್ಮ ಅಥವಾ ಇಸ್ಲಾಂ ಅನ್ನು ಮೀಸಲಾತಿಯಿಂದ ಹೊರಗಿಡಲಾಯಿತು' ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದ್ದರೆ, ಅದರ ನಂತರದ ಪ್ಯಾರಾದಲ್ಲಿ 'ನೂರಾರು ವರ್ಷಗಳಿಂದ ಹಿಂದೂ ಸಮಾಜದಲ್ಲಿ ಇದ್ದ ದಬ್ಬಾಳಿಕೆಯ ವಾತಾವರಣವು ಪರಿಶಿಷ್ಟ ಜಾತಿಗಳಲ್ಲಿ ಕ್ರಿಶ್ಚಿಯನ್ ಅಥವಾ ಇಸ್ಲಾಮಿಕ್ ಸಮಾಜದಲ್ಲಿ ಅಸ್ತಿತ್ವದಲ್ಲಿದೆ ಎಂದು ಸೂಚಿಸಲು ಅಧಿಕೃತ ಮಾಹಿತಿಯಿದೆ' ಎಂದು ಹೇಳಿಕೊಂಡಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಅಫಿದವಿಟ್‌ನಲ್ಲಿ ಇಂತಹ ಇನ್ನಷ್ಟು ವೈರುಧ್ಯಗಳಿದ್ದು, ಕ್ರಿಶ್ಚಿಯನ್ ಮತ್ತು ಮುಸ್ಲಿಂ ದಲಿತರು ಇತರ ದಲಿತ ಸಮುದಾಯಗಳಿಗೆ ಸಮಾನವಾದ ದಬ್ಬಾಳಿಕೆಯನ್ನು ಎದುರಿಸಿದ್ದಾರೆಯೇ ಮತ್ತು ಅವರನ್ನು (ಎಸ್‌ಸಿ ಪಟ್ಟಿಯಿಂದ) ಹೊರಗಿಡುವಿಕೆಯು ದತ್ತಾಂಶವನ್ನು ಆಧರಿಸಿದೆಯೇ ಎಂಬುದರ ಕುರಿತು ಯಾವುದೇ ಸಂಶೋಧನೆ ಇಲ್ಲ ಎಂದು ಸರ್ಕಾರವು ಹೇಳಿದೆ.