ನವದೆಹಲಿ: 'ನೋಟು ಅಮಾನ್ಯೀಕರಣವು ಆರ್ಥಿಕ ನೀತಿಯ ಭಾಗವಾಗಿ ಕೈಗೊಂಡ ಅತ್ಯಂತ ಕಠಿಣ ನಿರ್ಧಾರ. ಭಾರತೀಯ ರಿಸರ್ವ್ ಬ್ಯಾಂಕ್‌ನೊಂದಿಗೆ (ಆರ್‌ಬಿಐ) ವ್ಯಾಪಕ ಸಮಾಲೋಚನೆ ನಡೆಸಿದ ಬಳಿಕ ಹಾಗೂ ಪೂರ್ವ ತಯಾರಿಗಳನ್ನು ಮಾಡಿಕೊಂಡ ನಂತರವೇ ಈ ತೀರ್ಮಾನ ತೆಗೆದುಕೊಳ್ಳಲಾಗಿತ್ತು' ಎಂದು ಕೇಂದ್ರ ಸರ್ಕಾರ ಬುಧವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ನೋಟು ಅಮಾನ್ಯೀಕರಣ ನಿರ್ಧಾರದ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿದ್ದ ಹಲವು ಅರ್ಜಿಗಳ ವಿಚಾರಣೆ ನಡೆಸಿದ್ದ ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಸಾಂವಿಧಾನಿಕ ಪೀಠವು ಈ ಕುರಿತು ವಿಸ್ತೃತ ಪ್ರತಿಕ್ರಿಯೆ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು.
ಈ ಕುರಿತು ಲಿಖಿತ ಪ್ರತಿಕ್ರಿಯೆ ಸಲ್ಲಿಸಿರುವ ಕೇಂದ್ರ ಹಣಕಾಸು ಸಚಿವಾಲಯ 'ಆರ್ಥಿಕ ನೀತಿಯ ಸುಧಾರಣೆಯ ಹಂತವಾಗಿ ಹಲವು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ₹500 ಹಾಗೂ ₹1,000 ಮುಖಬೆಲೆಯ ನೋಟುಗಳನ್ನು ಹಿಂಪಡೆದಿದ್ದು ಇದರಲ್ಲೊಂದು' ಎಂದು ಹೇಳಿದೆ.
'ನೋಟು ಅಮಾನ್ಯೀಕರಣವು ನಕಲಿ ಹಾಗೂ ಕಪ್ಪು ಹಣಕ್ಕೆ ಕಡಿವಾಣ ಹಾಕುವ, ಭಯೋತ್ಪಾದನೆಗೆ ಹಣಕಾಸಿನ ನೆರವು ಒದಗಿಸುವುದನ್ನು ತಪ್ಪಿಸುವ, ತೆರಿಗೆ ವಂಚನೆಯನ್ನು ತಡೆಯುವ ಕಾರ್ಯತಂತ್ರದ ಭಾಗವಾಗಿತ್ತು. ನೋಟು ಅಮಾನ್ಯೀಕರಣದ ಬಳಿಕ ದೇಶದ ಆರ್ಥಿಕತೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಂಡಿತ್ತು' ಎಂದೂ ತಿಳಿಸಿದೆ.