ತಿರುವನಂತಪುರಂ: ದೇಶದಲ್ಲಿ ಜಾತ್ಯತೀತತೆ, ಪ್ರಜಾಪ್ರಭುತ್ವ ಮತ್ತು ಒಕ್ಕೂಟದಂತಹ ಸಾಂವಿಧಾನಿಕ ಮೌಲ್ಯಗಳು ಗಂಭೀರ ಸವಾಲುಗಳನ್ನು ಎದುರಿಸುತ್ತಿದ್ದು, ರಾಜ್ಯಗಳು ನಿಜವಾದ ಫೆಡರಲ್ ಪರಿಕಲ್ಪನೆಯನ್ನು ಸಾಕಾರಗೊಳಿಸುವಲ್ಲಿ ಅಡೆತಡೆಗಳು ಸೃಷ್ಟಿಯಾಗುತ್ತಿವೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಶನಿವಾರ ಹೇಳಿದ್ದಾರೆ.
ಆಯಾ ರಾಜ್ಯಗಳ ಜನರಿಂದ ಆಯ್ಕೆಯಾದ ರಾಜ್ಯ ಸರ್ಕಾರಗಳು ದೇಶದ ಅಭಿವೃದ್ಧಿಯಲ್ಲಿ ಕೇಂದ್ರ ಸರ್ಕಾರದೊಂದಿಗೆ ಸಮಾನ ಪಾತ್ರ ವಹಿಸಬೇಕು ಎಂಬ ಮೂಲಭೂತ ಪ್ರಜಾಸತ್ತಾತ್ಮಕ ತತ್ವವನ್ನು ಮರೆಯಲಾಗುತ್ತಿದೆ ಎಂದು ಕೇರಳ ಸಿಎಂ ತಮ್ಮ ಸಂವಿಧಾನ ದಿನಾಚರಣೆ ಸಂದೇಶದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
1949 ರಲ್ಲಿ ಸಂವಿಧಾನ ಸಭೆಯು ಭಾರತದ ಸಂವಿಧಾನವನ್ನು ಅಂಗೀಕರಿಸಿದ ನೆನಪಿಗಾಗಿ ನವೆಂಬರ್ 26 ಅನ್ನು ಸಂವಿಧಾನ ದಿನವಾಗಿ ಆಚರಿಸಲಾಗುತ್ತಿದೆ.
"ನಮ್ಮ ಸಾಮ್ರಾಜ್ಯಶಾಹಿ-ವಿರೋಧಿ ಹೋರಾಟದ ಆದರ್ಶಗಳನ್ನು ಒಳಗೊಂಡಿರುವ ಭಾರತದ ಸಂವಿಧಾನವು ಅದರ 73ನೇ ವಾರ್ಷಿಕೋತ್ಸವದಲ್ಲಿ ವ್ಯಾಪಕವಾದ ಸವಾಲುಗಳನ್ನು ಎದುರಿಸುತ್ತಿದೆ. ಅಂತಹ ಅಪಾಯಗಳನ್ನು ಹಿಮ್ಮೆಟ್ಟಿಸಲು ಮತ್ತು ಸಂವಿಧಾನದ ಆತ್ಮ ಮತ್ತು ಮೌಲ್ಯಗಳನ್ನು ರಕ್ಷಿಸಲು ಹೋರಾಡುವ ಸಮಯ ಇದು" ವಿಜಯನ್ ಹೇಳಿದ್ದಾರೆ.
ತಮ್ಮ ಸರ್ಕಾರ ಮತ್ತು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ನಡುವೆ ನಡೆಯುತ್ತಿರುವ ಜಗಳವನ್ನು ಪರೋಕ್ಷವಾಗಿ ಉಲ್ಲೇಖಿಸಿದ ಕೇರಳ ಸಿಎಂ, ಚುನಾಯಿತ ಸರ್ಕಾರಗಳ ಮೇಲೆ ಒತ್ತಡ ಹೇರಲು ಉನ್ನತ ಸಾಂವಿಧಾನಿಕ ಸ್ಥಾನಗಳನ್ನು ಹೊಂದಿರುವವರನ್ನು ಸಹ ಬಳಸಿಕೊಳ್ಳಲಾಗುತ್ತಿದೆ ಎಂದು ಈ ಸಾಂವಿಧಾನಿಕ ದಿನದಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.