ಬದಿಯಡ್ಕ: ದಂತ ವೈದ್ಯ ಡಾ. ಕೃಷ್ಣಮೂರ್ತಿ ಸರ್ಪಂಗಳ ಅವರ ನಿಗೂಢ ಸಾವಿನ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಈಗಾಗಲೇ ಕುಂದಾಪುರ ಠಾಣೆ ಪೊಲೀಸರು ಮಾಹಿತಿ ಸಂಗ್ರಹಕ್ಕಾಗಿ ಬದಿಯಡ್ಕ ಠಾಣೆಗೆ ಆಗಮಿಸಿದ್ದು, ವೈದ್ಯರು ಬದಿಯಡ್ಕದಿಂದ ಕುಂದಾಪುರಕ್ಕೆ ಯಾವ ಹಾದಿಯಾಗಿ ತೆರಳಿದ್ದಾರೆ ಎಂಬ ಬಗ್ಗೆ ಮಾಹಿತಿ ಕಲೆಹಾಕಲಾರಂಭಿಸಿದ್ದಾರೆ. ಈ ಬಗ್ಗೆ 50ಕ್ಕೂ ಹೆಚ್ಚು ಸಿಸಿ ಕ್ಯಾಮರಾ ದಋಶ್ಯಾವಳಿಗಳನ್ನು ಸಂಗ್ರಹಿಸಿದ್ದು, ಇದರ ಪರಿಶೀಲನಾ ಕಾರ್ಯ ನಡೆಸಲಾಗುತ್ತಿದೆ.
ಕುಂಬಳೆಯಿಂದ ವೈದ್ಯರು ಕುಂದಾಪುರಕ್ಕೆ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ತೆರಳಿರುವ ಬಗ್ಗೆ ಸೂಚನೆ ಲಭಿಸಿದೆ. ಕುಂದಾಪುರದ ಶಾಸ್ತ್ರಿ ಸರ್ಕಲ್‍ನಲ್ಲಿ ಬಸ್ಸಿಳಿದಿರುವುದಾಗಿಯೂ ಮಾಹಿತಿ ಕಲೆಹಾಕಲಾಗಿದೆ. ಅಲ್ಲಿಂದ ಮೃತದೇಹ ಪತ್ತೆಯಾಗಿರುವ ಪ್ರದೇಶಕ್ಕೆ ಐದು ಕಿ.ಮೀ ದೂರವಿದ್ದು, ಶಾಸ್ತ್ರಿ ವೃತ್ತದಿಂದ ಅಲ್ಲಿಗೆ ಹೇಗೆ ಸಂಚರಿಸಿದ್ದಾರೆ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದ್ದು, ಇದಕ್ಕಾಗಿ ಸಿಸಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ. ನ. 8ರಂದು ಮಧ್ಯಾಹ್ನ ಬದಿಯಡ್ಕದ ತಮ್ಮ ಕ್ಲಿನಿಕ್‍ನಿಂದ ನಿಗೂಢವಾಗಿ ನಾಪತ್ತೆಯಾಗಿದ್ದ ಡಾ. ಕೃಷ್ಣ ಮೂರ್ತಿ ಅವರ ಮೃತದೇಹ ಮರುದಿನ ಕುಂದಾಪುರ ಹಟ್ಟಿಯಂಗಡಿ ಸನಿಹದ ಕಾಡುಅಜ್ಜಿಮನೆ ಬಳಿ ರೈಲ್ವೆ ಹಳಿಯಲ್ಲಿ ಪತ್ತೆಯಾಗಿತ್ತು. ಮಹಿಳೆಯೊಬ್ಬರ ಜತೆ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪದಲ್ಲಿ ತಂಡವೊಂದು ಕ್ಲಿನಿಕ್‍ಗೆ ಆಗಮಿಸಿ ವೈದ್ಯರನ್ನು ಅವಾಚ್ಯವಗಿ ನಿಂದಿಸಿ, ಇವರಿಗೆ ಬೆದರಿಕೆಯೊಡ್ಡಿತ್ತು. ವೈದ್ಯರ ನಿಗೂಢ ಸಾವಿಗೆ ಸಂಬಂಧಿಸಿ ಐದು ಮಂದಿ ಮುಸ್ಲಿಂ ಲೀಗ್ ಕಾರ್ಯಕರ್ತರನ್ನು ಬಂಧಿಸಲಾಗಿದ್ದು, ಇವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಬದಿಯಡ್ಕದ ವೈದ್ಯರ ನಿಗೂಢ ಸಾವು-ತನಿಖೆ ಚುರುಕುಗೊಳಿಸಿದ ಪೊಲೀಸರು
0
ನವೆಂಬರ್ 17, 2022