ಉದಯಪುರ: ಉದಯಪುರ-ಅಹಮದಾಬಾದ್ ನಡುವಿನ ರೈಲು ಹಳಿಗಳನ್ನು ದುರಸ್ತಿ ಮಾಡಲಾಗಿದ್ದು, ಸೋಮವಾರ ರೈಲು ಸಂಚಾರ ಪುನರಾರಂಭಗೊಂಡಿದೆ. ಭಾನುವಾರ ನಸುಕಿನ ವೇಳೆ ಈ ಮಾರ್ಗದ ಜವಾರ್ ಮತ್ತು ಖವಾರ್ ಚಂದಾ ಪ್ರದೇಶಗಳ ನಡುವಿನ ಸೇತುವೆಯೊಂದರ ಬಳಿ ಸ್ಫೋಟ ಸಂಭವಿಸಿತ್ತು.
ಅಕ್ಟೋಬರ್ 31ರಂದು ಪ್ರಧಾನಿ ನರೇಂದ್ರ ಮೋದಿ ಅವರು ಅಹಮದಾಬಾದ್‌ನಲ್ಲಿ ಈ ರೈಲು ಮಾರ್ಗವನ್ನು ಉದ್ಘಾಟಿಸಿದ್ದರು.
'ಭಯೋತ್ಪಾದನಾ ನಿಗ್ರಹ ದಳವು ರೈಲು ಸಂಚಾರಕ್ಕೆ ಅನುಮತಿ ನೀಡಿದೆ. ಸ್ಫೋಟ ಸಂಬಂಧ ರಾಷ್ಟ್ರೀಯ ತನಿಖಾ ದಳ, ಭಯೋತ್ಪಾದನಾ ನಿಗ್ರಹ ದಳ ಸೇರಿದಂತೆ ಕೇಂದ್ರ ಮತ್ತು ರಾಜ್ಯದ ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ' ಎಂದು ವಾಯುವ್ಯ ರೈಲ್ವೆ ವಕ್ತಾರರೊಬ್ಬರು ಸೋಮವಾರ ಮಾಹಿತಿ ನೀಡಿದರು.
'ಘಟನಾ ಸ್ಥಳದಿಂದ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ. ಗಣಿ ಸ್ಫೋಟಿಸುವ ಸ್ಫೋಟಕವನ್ನು ಬಳಸಿರುವುದು ತನಿಖೆಯಿಂದ ತಿಳಿದುಬಂದಿದೆ' ಎಂದು ತಿಳಿಸಿದರು.