ನವದೆಹಲಿ: ಪಾಕಿಸ್ತಾನ, ಅಫ್ಗಾನಿಸ್ತಾನ, ಬಾಂಗ್ಲಾದೇಶದಿಂದ ವಲಸೆ ಬಂದಿರುವ ಅಲ್ಪಸಂಖ್ಯಾತರಾದ ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಹಾಗೂ ಕ್ರೈಸ್ತರಿಗೆ ಭಾರತದ ಪೌರತ್ವ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ನೆರೆಯ ದೇಶಗಳ ಈ ವಲಸಿಗ ಅಲ್ಪಸಂಖ್ಯಾತರು ಗುಜರಾತ್‌ನ ಎರಡು ಜಿಲ್ಲೆಗಳಲ್ಲಿ ವಾಸಿಸುತ್ತಿದ್ದು, ಇವರಿಗೆ ಪೌರತ್ವ ಕಾಯ್ದೆ-1995 ರ ಅಡಿ ದೇಶದ ಪೌರತ್ವ ನೀಡಲಾಗುತ್ತದೆ. 2019ರ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಬದಲಾಗಿ, ಪೌರತ್ವ ಕಾಯ್ದೆ-1995ರಡಿ ಪೌರತ್ವ ನೀಡುತ್ತಿರುವ ಕೇಂದ್ರ ಸರ್ಕಾರದ ನಡೆಗೆ ಮಹತ್ವ ಬಂದಿದೆ.
ಅಫ್ಗಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ಬರುವ ಹಿಂದೂಗಳು ಸೇರಿ ಅಲ್ಪಸಂಖ್ಯಾತರಿಗೆ ಭಾರತೀಯ ಪೌರತ್ವ ನೀಡಲು ಸಿಎಎ ಅವಕಾಶ ಕಲ್ಪಿಸಲಿದೆ. ಆದರೆ, ಈ ಕಾಯ್ದೆಯಡಿ ನಿಯಮಗಳನ್ನು ಸರ್ಕಾರ ಇನ್ನೂ ರೂಪಿಸದ ಕಾರಣ, ಈವರೆಗೆ ಯಾರಿಗೂ ಸಿಎಎ ಅಡಿಯಲ್ಲಿ ಪೌರತ್ವ ನೀಡಲಾಗಿಲ್ಲ.
ಕೇಂದ್ರ ಗೃಹ ಸಚಿವಾಲಯ ಹೊರಡಿಸಿರುವ ಅಧಿಸೂಚನೆಯಲ್ಲಿ ಗುಜರಾತ್‌ನ ಆನಂದ್ ಮತ್ತು ಮೆಹಸಾನಾ ಜಿಲ್ಲೆಗಳಲ್ಲಿ ನೆಲೆಸಿರುವ ನೆರೆಯ ದೇಶಗಳ ವಲಸಿಗ ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರೈಸ್ತರಿಗೆ 1995ರ ಪೌರತ್ವ ಕಾಯ್ದೆಯ ಸೆಕ್ಷನ್ 5 ಅಥವಾ ಸೆಕ್ಷನ್ 6ರ ಅಡಿ ಮತ್ತು 2009ರ ಪೌರತ್ವ ನಿಯಮಗಳ ನಿಬಂಧನೆಗಳಿಗೆ ಅನುಗುಣವಾಗಿ ಭಾರತದ ಪ್ರಜೆಯಾಗಿ ನೋಂದಣಿಗೆ ಅವಕಾಶ ನೀಡಲಾಗುವುದು. ಜತೆಗೆ ಅವರಿಗೆ ಈ ಕಾಯ್ದೆಯ ನಿಯಮ, ನಿಬಂಧನೆಗಳಿಗೆ ಅನುಗುಣವಾಗಿ ಸಹಜವಾಗಿಯೇ ಭಾರತೀಯ ಪೌರತ್ವದ ಪ್ರಮಾಣ ಪತ್ರ ನೀಡಲಾಗುವುದು ಎಂದು ಹೇಳಿದೆ.