ನವದೆಹಲಿ: ನ್ಯಾಯಾಲಯಗಳು ಕೇವಲ ಕಡತಗಳು ಮತ್ತು ಆದೇಶಗಳ ಜೊತೆ ವ್ಯವಹರಿಸುವುದಿಲ್ಲ, ಅವು ಮಾನವರ ಜೊತೆಯೂ ವ್ಯವಹರಿಸುತ್ತವೆ. ಹಾಗಾಗಿ ಕಾನೂನಿನ ಜೊತೆ ಸೂಕ್ಷ್ಮತೆ ಮತ್ತು ಸಹಾನುಭೂತಿಯನ್ನೂ ನ್ಯಾಯಾಲಯಗಳು ಹೊಂದಿರಬೇಕು ಎಂದು ದೆಹಲಿ ಹೈಕೋರ್ಟ್ ಹೇಳಿದೆ.
ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಕೊಲೆ ಮೊಕದ್ದಮೆಯ ಅಪರಾಧಿಯೊಬ್ಬ ತನ್ನ ಕುಟುಂಬದ ಆಸ್ತಿ ವ್ಯವಹಾರವನ್ನು ಬಗೆಹರಿಸಲು ಮತ್ತು ಆತನ ತಾಯಿಯ ಸಾವಿನಿಂದ ಉಂಟಾಗಿದ್ದ ಮಾನಸಿಕ ಒತ್ತಡವನ್ನು ನಿಭಾಯಿಸಲು ಎರಡು ತಿಂಗಳ ಕಾಲ ಪೆರೋಲ್ ಮೇಲೆ ಬಿಡುಗಡೆ ಮಾಡಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದನು.
ಜೈಲಿನಲ್ಲಿ ಆತನ ನಡುವಳಿಕೆ ಸರಿಯಿಲ್ಲ ಎಂಬ ಕಾರಣದ ಜೊತೆ ಹಲವಾರು ಇತರ ಕಾರಣಗಳನ್ನು ನೀಡಿ ದೆಹಲಿ ಸರ್ಕಾರ ಈ ಪರೋಲ್ ಬೇಡಿಕೆಯನ್ನು ತಳ್ಳಿಹಾಕಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ನ್ಯಾಯಾಧೀಶೆ ಸ್ವರಣ ಕಾಂತಾ ಶರ್ಮ ಅವರು, ನ್ಯಾಯಾಲಯಗಳು ಸಹಾನುಭೂತಿ ಹೊಂದಿರಬೇಕು ಎಂದು ಹೇಳಿದ್ದಾರೆ. ಜೊತೆಗೆ, ಅಪರಾಧಿಯನ್ನು 45 ದಿನಗಳ ಪೆರೋಲ್ ಮೇಲೆ ಬಿಡುಗಡೆ ಮಾಡುವಂತೆ ನಿರ್ದೇಶಿಸಿದ್ದಾರೆ.
ಅರ್ಜಿದಾರನಿಗೆ ಈ ಮೊದಲು ಏಳು ಬಾರಿ ಪೆರೋಲ್ ನೀಡಲಾಗಿದೆ. ಆದರೆ ಆ ಪೆರೋಲ್‌ಗಳನ್ನು ಆತ ದುರ್ಬಳಕೆ ಮಾಡಿಕೊಂಡಿಲ್ಲ ಎಂಬುದನ್ನು ಕೋರ್ಟ್ ಪರಿಗಣಿಸಿದೆ. ₹25,000 ವೈಯಕ್ತಿಕ ಬಾಂಡ್ ಇರಿಸಿ ಪರೋಲ್ ತೆಗೆದುಕೊಳ್ಳುವಂತೆ ಕೋರ್ಟ್ ಅರ್ಜಿದಾರನಿಗೆ ಆದೇಶಿಸಿದೆ.