ನವದೆಹಲಿ: ಇತಿಹಾಸದ ಪುಟಗಳಲ್ಲಿ ಕಳೆದು ಹೋಗಿರುವ ವೀರ ಯೋಧರು, ಧೈರ್ಯಶಾಲಿಗಳನ್ನು ಸ್ಮರಿಸುವ ಮೂಲಕ ಭಾರತವು ತನ್ನ ಹಿಂದಿನ ತಪ್ಪುಗಳನ್ನು ಸರಿಪಡಿಸಿಕೊಳ್ಳುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಇಲ್ಲಿ ತಿಳಿಸಿದರು.
ವಸಾಹತುಶಾಹಿ ಯುಗದಲ್ಲಿ ಪಿತೂರಿಯ ಭಾಗವಾಗಿ ಬರೆಯಯಲಾದ ಇತಿಹಾಸದಲ್ಲಿ ಈ ಮಹಾನ್ ನಾಯಕರನ್ನು ತೆರೆಯ ಮರೆಗೆ ಸರಿಸಲಾಗಿತ್ತು ಎಂದು ಪ್ರಧಾನಿ ಬೇಸರ ವ್ಯಕ್ತಪಡಿಸಿದರು.
ವೀರ ಯೋಧ ಲಾಚಿತ್ ಬರ್ಫುಕನ್ ಅವರ 400ನೇ ಜನ್ಮ ದಿನಾಚರಣೆಯ ಸಮಾರಂಭದಲ್ಲಿ ಮಾತನಾಡಿದ ಅವರು, 'ಭಾರತದ ಇತಿಹಾಸವು ಕೇವಲ ಗುಲಾಮಗಿರಿಗೆ ಸಂಬಂಧಿಸಿದ್ದಲ್ಲ. ಅದರಲ್ಲಿ ಯೋಧರೂ ಇದ್ದಾರೆ' ಎಂದರು.
'ಭಾರತದ ಇತಿಹಾಸವು ಯೋಧರ ಇತಿಹಾಸ, ವಿಜಯದ ಇತಿಹಾಸ, ತ್ಯಾಗ, ನಿಸ್ವಾರ್ಥ ಮತ್ತು ಶೌರ್ಯದ ಇತಿಹಾಸವಾಗಿದೆ' ಎಂದು ಅವರು ಹೇಳಿದರು.
'ವಸಾಹತುಶಾಯಿ ಯುಗದಲ್ಲಿ ಪಿತೂರಿಯ ಭಾಗವಾಗಿ ಬರೆಯಲಾದ ಇತಿಹಾಸವನ್ನೇ ಸ್ವಾತಂತ್ರ್ಯ ನಂತರವೂ ಕಲಿಸುತ್ತಿರುವುದು ದುರದೃಷ್ಟವಾಗಿದೆ' ಎಂದು ಪ್ರಧಾನಿ ಅಸಮಾಧಾನ ವ್ಯಕ್ತಪಡಿಸಿದರು.
'ಗುಲಾಮಗಿರಿಯ ಈ ಕಾರ್ಯಸೂಚಿಯನ್ನು ಸ್ವಾತಂತ್ರ್ಯದ ಬಳಿಕ ಬದಲಿಸುವ ಅಗತ್ಯವಿತ್ತು. ಆದರೆ ಅದು ಆಗಲಿಲ್ಲ' ಎಂದು ಮೋದಿ ಹೇಳಿದರು.
'ಈ ದಬ್ಬಾಳಿಕೆದಾರರ ವಿರುದ್ಧ ದೇಶದ ಮೂಲೆ ಮೂಲೆಗಳಲ್ಲಿ ವೀರ ಪುತ್ರರು, ಪುತ್ರಿಯರು ಹೋರಾಡಿದರು. ಆದರೆ ಈ ಇತಿಹಾಸವನ್ನು ಉದ್ದೇಶಪೂರ್ವಕವಾಗಿಯೇ ಹತ್ತಿಕ್ಕಲಾಗಿದೆ' ಎಂದು ಅವರು ದೂರಿದರು.
'ಆದರೆ, ಇಂದು ಭಾರತವು ವಸಾಹತುಶಾಹಿಯ ಸಂಕೋಲೆಗಳನ್ನು ಮುರಿದಿದೆ. ನಮ್ಮ ಪರಂಪರೆಯನ್ನು ಆಚರಿಸುತ್ತಾ, ನಮ್ಮ ವೀರರನ್ನು ಹೆಮ್ಮೆಯಿಂದ ಸ್ಮರಿಸುತ್ತಾ ಮುನ್ನುಗ್ಗುತ್ತಿದೆ' ಎಂದು ಹೇಳಿದರು.
ಲಾಚಿತ್ ಬರ್ಫುಕನ್ ಅವರು ರಕ್ತ ಸಂಬಂಧಿಗಳ ಹಿತಕ್ಕಿಂತ ರಾಷ್ಟ್ರೀಯ ಹಿತಾಸಕ್ತಿಯೇ ಮುಖ್ಯ ಎಂದುಕೊಂಡಿದ್ದರು. ಅವರು ಇದಕ್ಕಾಗಿ ತನ್ನ ನಿಕಟ ಸಂಬಂಧಿಯನ್ನು ಶಿಕ್ಷಿಸಲೂ ಹಿಂಜರಿಯಲಿಲ್ಲ ಎಂದು ಪ್ರಧಾನಿ ಸ್ಮರಿಸಿದರು.
ಅಸ್ಸಾಂನ ಅಹೋಂ ಸಾಮ್ರಾಜ್ಯದ ಸೇನೆಯ ಜನರಲ್ ಆಗಿದ್ದ ಬರ್ಫುಕನ್ (1622ರ ನವೆಂಬರ್‌ನಿಂದ 1672ರ ಏಪ್ರಿಲ್) ಅವರು ಮೊಘಲರನ್ನು ಸೋಲಿಸಿದ್ದರು. ಅಲ್ಲದೆ ಈ ಭಾಗದಲ್ಲಿ ರಾಜ್ಯ ವಿಸ್ತರಿಸುವ ಔರಂಗಜೇನ ಮಹತ್ವಾಕಾಂಕ್ಷಿಗೆ ಅಡ್ಡಿಯಾಗಿದ್ದರು.
ಇತಿಹಾಸದ ಪುನರ್ ರಚನೆ ಯಾರಿಂದಲೂ ನಿಲ್ಲಿಸಲಾಗದು: ಅಮಿತ್ ಶಾ
ಇತಿಹಾಸವನ್ನು 'ವಿರೂಪ'ಗಳಿಂದ ಮುಕ್ತಗೊಳಿಸುವ ಮತ್ತು ಪುನರ್ ರಚಿಸುವ ಕಾರ್ಯವನ್ನು ಯಾರಿಂದಲೂ ನಿಲ್ಲಿಸಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಅಮಿತ್ ಶಾ ತಿಳಿಸಿದರು.
ಲಾಚಿತ್ ಬರ್ಫುಕನ್ ಅವರ 400ನೇ ಜನ್ಮ ದಿನಾಚರಣೆಯಲ್ಲಿ ಮಾತನಾಡಿದ ಅವರು, ದೇಶದ 30 ಮಹಾನ್ ಭಾರತೀಯ ಸಾಮ್ರಾಜ್ಯಗಳು ಮತ್ತು ಮಾತೃಭೂಮಿಗಾಗಿ ಶೌರ್ಯದಿಂದ ಹೋರಾಡಿದ 300 ಯೋಧರ ಬಗ್ಗೆ ಸಂಶೋಧನೆ ಕೈಗೊಂಡು, ಬರೆಯುವಂತೆ ತಜ್ಞರು, ವಿದ್ವಾಂಸರನ್ನು ಅವರು ಕೋರಿದರು.
'ವೀರ ಯೋಧ ಲಾಚಿತ್ ಬರ್ಫುಕನ್ ಇಲ್ಲದಿದ್ದರೆ ಈಶಾನ್ಯ ಭಾರತವು ದೇಶದ ಭಾಗವಾಗುತ್ತಿರಲಿಲ್ಲ' ಎಂದು ಗೃಹ ಸಚಿವರು ತಿಳಿಸಿದರು.
ಬರ್ಫುಕನ್ ಅವರು ಈಶಾನ್ಯ ಭಾರತವನ್ನಷ್ಟೇ ಅಲ್ಲದೆ ಇಡೀ ಆಗ್ನೇಯ ಏಷ್ಯಾವನ್ನು 'ಧಾರ್ಮಿಕ ಮತಾಂಧ' ಔರಂಗಜೇಬನಿಂದ ರಕ್ಷಿಸಿದರು ಎಂದು ಶಾ ಹೇಳಿದರು.