ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಂತಕರಾದ ನಳಿನಿ ಶ್ರೀಹರನ್, ಜಯಕುಮಾರ್, ಶಾಂತನ್ ಮತ್ತು ರಾಬರ್ಟ್ ಪಾಯಸ್ ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ ಜೈಲಿನಿಂದ ಬಿಡುಗಡೆಯಾಗಿ ಹೊರಬಂದಿದ್ದು ಇನ್ನುಳಿದ ಪೆರಾರಿವಾಲನ್ ಶೀಘ್ರದಲ್ಲಿಯೇ ಬಿಡುಗಡೆಯಾಗುವ ಸಾಧ್ಯತೆಯಿದೆ.
ರಾಜೀವ್ ಹಂತಕರ ಬಿಡುಗಡೆ ಆದೇಶವನ್ನು ಸುಪ್ರೀಂ ಕೋರ್ಟ್ ಶುಕ್ರವಾರ (ನ.11) ನೀಡಿತ್ತು.
ನಳಿನಿ ಬೆಳಗ್ಗೆ ವೆಲ್ಲೂರು ಪೊಲೀಸ್ ಠಾಣೆಗೆ ಹಾಜರಾಗಿದ್ದರು. ಇದೀಗ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ನಳಿನಿ ಶ್ರೀಹರನ್, ರವಿಚಂದ್ರನ್ ಜೈಲಿನಲ್ಲಿದ್ದುಕೊಂಡೇ ಉನ್ನತ ವ್ಯಾಸಂಗ ಪೂರ್ಣಗೊಳಿಸಿದ್ದಾರೆ ಎಂದು ಕೋರ್ಟ್ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ. 31 ವರ್ಷಗಳ ಜೈಲುವಾಸದ ನಂತರ ನಳಿನಿ ಶ್ರೀಹರನ್ ಹೊರಬಂದಿದ್ದಾರೆ.
ರಾಜೀವ್ ಗಾಂಧಿ ಅವರನ್ನು 1991ರಲ್ಲಿ ನಳಿನಿ ಶ್ರೀಹರನ್, ಸಂತನ್, ಮುರುಗನ್, ರಾಬರ್ಟ್ ಪಾಯಸ್, ಆರ್.ಪಿ. ರವಿಚಂದ್ರನ್ ಅವರನ್ನು ಒಳಗೊಂಡ ತಂಡ ಹತ್ಯೆ ಮಾಡಿತ್ತು. ಪ್ರಕರಣದ ಅಪರಾಧಿಗಳು 3 ದಶಕದಿಂದ ಜೈಲಿನಲ್ಲಿ ಇದ್ದಾರೆ. ಸೆರೆವಾಸದ ವೇಳೆ ಎಲ್ಲ ಅಪರಾಧಿಗಳ ನಡವಳಿಕೆ ತೃಪ್ತಿಕರವಾಗಿದೆ. ಈ ಕಾರಣದಿಂದ ಅವರನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಬಿ.ವಿ.ನಾಗರತ್ನ ಅವರ ಪೀಠ ಅಭಿಪ್ರಾಯ ದಾಖಲಿಸಿತ್ತು.
ಬಿಡುಗಡೆಯಾಗಿರುವ ನಳಿನಿ ಶ್ರೀಹರನ್, ಚೆನ್ನೈನ ನರ್ಸ್ ಮತ್ತು ಪೊಲೀಸ್ ಅಧಿಕಾರಿಯ ಪುತ್ರಿ. ರಾಜೀವ್ ಗಾಂಧಿ ಹತ್ಯೆಯಾದ ಶ್ರೀಪೆರಂಬದೂರಿನ ಹತ್ಯಾ ಸ್ಥಳದಲ್ಲಿದ್ದ ಏಕಮಾತ್ರ ಅಪರಾಧಿ. ರಾಜೀವ್ ಹತ್ಯೆ ಮಾಡಲೆಂದು ಸ್ಥಳಕ್ಕೆ ಬಂದಿದ್ದವರೊಂದಿಗೆ ನಳಿನಿಯಿದ್ದ ಫೋಟೋ ಬೆಳಕಿಗೆ ಬಂದಿದ್ದವು. ಬಂಧಿತ ನಳಿನಿಗೆ ಜನಿಸಿದ ಹೆಣ್ಣುಮಗುವನ್ನು 5 ವರ್ಷ ಕಾಲ ಜೈಲಿನಲ್ಲಿ ಬೆಳೆಸಲಾಗಿತ್ತು.
ಬಿಡುಗಡೆಯಾಗಿರುವ ಜಯಕುಮಾರ್, ರಾಬರ್ಟ್ ಪಯಾಸ್ನ ಸೋದರ ಸಂಬಂಧಿ. ಪಯಾಸ್ ಜತೆ ಭಾರತಕ್ಕೆ ಬಂದಿದ್ದ. ಶಿವರಸನ್ ಜತೆಗಿನ ನಿಕಟ ಸಂಬಂಧ ಉಲ್ಲೇಖಿಸಿ ಪ್ರಾಸಿಕ್ಯೂಷನ್ ಈತ ರಾಜೀವ್ ಹತ್ಯೆಯಲ್ಲಿ ಪ್ರಮುಖವಾಗಿ ಭಾಗಿಯಾಗಿದ್ದಾನೆ ಎಂದು ಆರೋಪಿಸಿತ್ತು. ಐಪಿಕೆಎಫ್ನಿಂದ ಜಯಕುಮಾರ್ ಕೂಡ ದೌರ್ಜನ್ಯಕ್ಕೊಳಗಾಗಿದ್ದ ಎನ್ನಲಾಗಿದೆ.
ಶ್ರೀಲಂಕಾದ ಪ್ರಜೆಯಾದ ಶಾಂತನ್, 1991ರಲ್ಲಿ ಅಲ್ಲಿಂದ ಪಲಾಯನ ಮಾಡಿ ಭಾರತಕ್ಕೆ ಬಂದಿದ್ದ. ಹತ್ಯೆ ಮಾಸ್ಟರ್ ಮೈಂಡ್ ಶಿವರಸನ್ ಮತ್ತು ಕೆಲವರೊಂದಿಗೆ ದೋಣಿ ಮೂಲಕ ಭಾರತ ತಲುಪಿದ್ದ ಎಂದು ಹೇಳಲಾಗಿದೆ. ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ, ಹತ್ಯೆಯಲ್ಲಿ ಶಾಂತನ್ ನೇರ ಭಾಗಿಯಾಗಿದ್ದಾನೆ.
ವಿದೇಶಕ್ಕೆ ಹೋಗಲು ಬಯಸಿ ಲಂಕಾದಿಂದ ಪಲಾಯನ ಮಾಡಿ ಮುರುಗನ್ ಬಂದಿದ್ದ. ನಳಿನಿ ಸೋದರನ ಗೆಳೆಯನಾದ ಮುರುಗನ್, ಸ್ವಲ್ಪ ಸಮಯ ಅವರ ಮನೆಯಲ್ಲಿಯೇ ನೆಲೆಸಿದ್ದ. ನಳಿನಿ-ಶಿವರಸನ್ ಮೊದಲ ಭೇಟಿಯಾಗಿದ್ದು ಮುರುಗನ್ ಮೂಲಕ.
ಶ್ರೀಲಂಕಾದ ಪ್ರಜೆ ರಾಬರ್ಟ್ ಪಯಾಸ್ 1990ರ ಸೆಪ್ಟೆಂಬರ್ನಲ್ಲಿ ಹೆಂಡತಿ ಮತ್ತು ಸಹೋದರಿಯರೊಂದಿಗೆ ಭಾರತಕ್ಕೆ ಬಂದಿದ್ದ. ಉಗ್ರಗಾಮಿ ಗುಂಪು ಎಲ್ಟಿಟಿಇ ಜತೆ ಸಂಪರ್ಕದಲ್ಲಿದ್ದ. ಶಿವರಸನ್ ಜತೆಗಿನ ನಿಕಟ ಸಂಬಂಧದ ಆರೋಪವೂ ಪಯಾಸ್ ಮೇಲಿತ್ತು. ಹತ್ಯೆ ಪಿತೂರಿಯಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದ. ಶ್ರೀಲಂಕಾದಲ್ಲಿ ಭಾರತೀಯ ಶಾಂತಿ ಪಾಲನಾ ಪಡೆ (ಐಪಿಕೆಎಫ್)ಯಿಂದ ದೌರ್ಜನ್ಯಕ್ಕೆ ಒಳಗಾಗಿದ್ದ.