ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿನ 5ನೇ ವಾರ್ಡ್ ಶಿವಗಿರಿಯ ಅಂಗನವಾಡಿ ಕೇಂದ್ರ ಹಾಗೂ ಪರಿಸರ ಪ್ರದೇಶಗಳನ್ನು ಜಲ ಜೀವನ್ ಮಿಷನ್ ಯೋಜನೆಗೊಳಪಡಿಸಿ ಕುಡಿನೀರು ವಿತರಣಾ ಯೋಜನೆಯನ್ನು ಉದ್ಘಾಟಿಸಲಾಯಿತು.
ಎತ್ತರ ಪ್ರದೇಶವಾದ್ದದಿಂದ ಕಳೆದ 22 ವರ್ಷಗಳಿಂದ ಕುಡಿನೀರ ಸೌಲಭ್ಯಗಳಿಂದ ನಿರ್ಲಕ್ಷ್ಯಕ್ಕೊಳಪಟ್ಟ ಅಂಗನವಾಡಿ ಹಾಗೂ ಪರಿಸರ ನಿವಾಸಿಗಳ ನಿರಂತರ ಬೇಡಿಕೆಯನ್ವಯ ಪಂ.ಆಡಳಿತ ಸಮಿತಿಯ ಒತ್ತಾಯದೊಂದಿಗೆ ಸ್ಥಾಪಿಸಲಾದ ಯೋಜನೆಯನ್ನು ಎಣ್ಮಕಜೆ ಗ್ರಾಮ ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಪಂಚಾಯತು ಅಭಿವೃದ್ಧಿಯ ವಿಷಯದಲ್ಲಿ ಎಲ್ಲಾ ಪಕ್ಷಗಳು ರಾಜಕೀಯ ಮರೆತು ಒಂದುಗೂಡಬೇಕಾಗಿದ್ದು ಇದರಲ್ಲಿ ರಾಜಕೀಯ ಸಲ್ಲದು ಎಂದರು.ಸಮಗ್ರ ಅಭಿವೃದ್ಧಿಗೆ ಈಗಾಗಲೇ ಹಲವಾರು ಯೋಜನೆಗಳನ್ನು ರೂಪೀಕರಿಸಿದ್ದು ಸಶಕ್ತವಾಗಿ ಜಾರಿಗೆ ತರುವಲ್ಲಿ ಸರ್ವರ ಸಹಕಾರ ಅತೀ ಅಗತ್ಯ ಎಂದರು. ಎಣ್ಮಕಜೆ ಪಂ.ಸದಸ್ಯೆ ಇಂದಿರಾ ಸಭೆಯ ಅಧ್ಯಕ್ಷತೆವಹಿಸಿದ್ದರು.
ಸಭೆಯಲ್ಲಿ ಊರಿನ ಹಿರಿಯ ಮುಂದಾಳು ರಾಮಚಂದ್ರ ಭಟ್ ಬದಿಯಾರು, ಜಲಜೀವನ್ ಮಿಷನ್ ಕೋರ್ಡಿನೇಟರ್ ಹರೀಶ್, ಅಂಗನವಾಡಿ ಆಧ್ಯಾಪಕಿ ಶಾಲಿನಿ, ಎಸ್ ಟಿ ಪ್ರಮೋಟರ್ ಗಳಾದ ಜ್ಯೋತಿ, ಮಹೇಶ್, ಮಾಜಿ ಪ್ರಮೋಟರ್ ಶಶಿಕಲಾ ಮೊದಲಾದವರು ಭಾಗವಹಿಸಿದ್ದರು. ಶಿವಗಿರಿ ಅಂಗನವಾಡಿ ಸಹಿತ ಈ ಪರಿಸರದ ಹಲವಾರು ಮನೆಗಳನ್ನು ಜಲಜೀವನ್ ಮಿಷನ್ ಯೋಜನೆಗೊಳಪಡಿಸಿದ್ದು ಇನ್ನು ಕೂಡಾ ಅರ್ಹರು ಬಾಕಿ ಇದ್ದರೆ ಯೋಜನೆಯೊಂದಿಗೆ ಸಹಕರಿಸಬೇಕೆಂದು ಸಂಯೋಜಕ ಹರೀಶ್ ತಿಳಿಸಿದ್ದಾರೆ.