ನವದೆಹಲಿ: ಚುನಾವಣಾ ಆಯುಕ್ತ ಅರುಣ್ ಗೋಯಲ್ ಅವರ ನೇಮಕಕ್ಕೆ ಸಂಬಂಧಪಟ್ಟ ಕಡತಗಳನ್ನು ತನ್ನೆದುರು ಹಾಜರುಪಡಿಸುವುದಕ್ಕೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ಅರುಣ್ ಗೋಯಲ್ ಅವರು ನ.19 ರಂದು ಚುನಾವಣಾ ಆಯುಕ್ತರಾಗಿ ನೇಮಕಗೊಂಡಿದ್ದರು.
ನ್ಯಾ. ಕೆಎಂ ಜೋಸೆಫ್ ನೇತೃತ್ವದ ಪಂಚ ಸದಸ್ಯರನ್ನೊಳಗೊಂಡ ಸಾಂವಿಧಾನಿಕ ಪೀಠ, ಕೇಂದ್ರಕ್ಕೆ ಸೂಚನೆ ನೀಡಿದ್ದು, ಗೋಯಲ್ ಸ್ವಯಂ ನಿವೃತ್ತಿ ಪಡೆದಿದ್ದರು. ಆದರೆ ಅವರನ್ನು ಚುನಾವಣಾ ಆಯುಕ್ತರನ್ನಾಗಿ ನೇಮಕ ಮಾಡಲಾಗಿರುವುದರ ಹಿಂದೆ ಯಾರದ್ದಾದರೂ ಕೈಚಳಕ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು, ಅದಕ್ಕಾಗಿ ನೇಮಕಕ್ಕೆ ಸಂಬಂಧಿಸಿದ ಕಡತವನ್ನು ಹಾಜರುಪಡಿಸಬೇಕೆಂದು ಕೋರ್ಟ್ ಸರ್ಕಾರಕ್ಕೆ ಹೇಳಿದೆ. ವಿಚಾರಣೆ ವೇಳೆ, ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರ ಆಕ್ಷೇಪಣೆಗಳನ್ನು ನ್ಯಾಯಪೀಠ ತಿರಸ್ಕರಿಸಿದೆ.
ಕೋರ್ಟ್ ಚುನಾವಣಾ ಆಯುಕ್ತ ಹಾಗೂ ಮುಖ್ಯ ಚುನಾವಣಾ ಆಯುಕ್ತರ ನೇಮಕಕ್ಕೆ ಸಂಬಂಧಿಸಿದ ಗಂಭೀರ ವಿಷಯದೊಂದಿಗೆ ವ್ಯವಹರಿಸುತ್ತಿದೆ. ಇದನ್ನು ಅಡ್ವೊಕೇಟ್ ಪ್ರಶಾಂತ್ ಭೂಷಣ್ ಅವರು ಪ್ರಸ್ತಾಪಿಸಿರುವ ವಿಷಯ ಎಂದಷ್ಟೇ ನೋಡುವುದಕ್ಕೆ ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.
ಸಾಂವಿಧಾನಿಕ ಪೀಠದ ವಿಚಾರಣೆ ನಡುವೆ ಕೋರ್ಟ್ ಕಡತವನ್ನು ನೋಡುವುದಕ್ಕೆ ನನ್ನ ಅಭ್ಯಂತರವಿದೆ ಎಂದು ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಹೇಳಿದ್ದಾರೆ. ಕಳೆದ ಗುರುವಾರ ವಿಷಯವನ್ನು ವಿಚಾರಣೆಗೆ ಕೈಗೆತ್ತಿಕೊಂಡಿರುವುದಾಗಿ ಹೇಳಿರುವ ಕೋರ್ಟ್, ನ.19 ರಿಂದಲೇ ಜಾರಿಗೆ ಬರುವಂತೆ ನೇಮಕಾತಿ ಮಾಡಲಾಗಿದೆ. ಆದ್ದರಿಂದ ಈ ನಡೆಗೆ ಏನು ಪ್ರಚೋದನೆ ಇರಬಹುದು ಎಂಬುದನ್ನು ನೋಡಬೇಕು ಎಂದು ಕೋರ್ಟ್ ಹೇಳಿದೆ.