ನವದೆಹಲಿ: ಹಿಂದುತ್ವವಾದಿ ಸಾವರ್ಕರ್ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿರುವ ಟೀಕೆಯು ಮಹಾರಾಷ್ಟ್ರದ 'ಮಹಾ ವಿಕಾಸ ಆಘಾಡಿ' ಮೈತ್ರಿಯಲ್ಲಿ ಬಿರುಕು ಮೂಡುವಂತೆ ಮಾಡಿದೆ. ಸಾವರ್ಕರ್ ವಿರುದ್ಧ ರಾಹುಲ್ ಗಾಂಧಿ ಅವರು ನಿರಂತರವಾಗಿ ಮಾಡುತ್ತಿರುವ ಟೀಕೆ ಗಳಿಂದ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾವು ಕಾಂಗ್ರೆಸ್ ಮೇಲೆ ಮುನಿಸಿಕೊಂಡಿದೆ.
'ಯಾವ ಕಠಿಣ ಕ್ರಮಗಳನ್ನು ಕೈಗೊ ಳ್ಳಲೂ ಹಿಂಜರಿಯುವುದಿಲ್ಲ. ಅಗತ್ಯ ಬಿದ್ದರೆ ಮೈತ್ರಿಯನ್ನೂ ಕಡಿದುಕೊಳ್ಳಬಹುದು' ಎಂದು ಶಿವಸೇನಾ (ಉದ್ಧವ್ ಠಾಕ್ರೆ ಬಣ) ನಾಯಕರು ಹೇಳುತ್ತಿದ್ದಾರೆ.
'ಸಾವರ್ಕರ್ ವಿರುದ್ಧ ರಾಹುಲ್ ಟೀಕೆ ಮಾಡಿದ್ದು ನಮಗೆ ಸಣ್ಣ ವಿಷಯವಲ್ಲ. ನಾವು ಸಾವರ್ಕರ್ ಸಿದ್ಧಾಂತದಲ್ಲಿ ನಂಬಿಕೆ ಇಟ್ಟಿದ್ದೇವೆ. ಸಾವರ್ಕರ್ ಕುರಿತು ಕಾಂಗ್ರೆಸ್ ಮಾತನಾಡಬಾರದಿತ್ತು' ಎಂದು ಸಂಸದ ಸಂಜಯ್ ರಾವುತ್ ಹೇಳಿದ್ದಾರೆ.
'ಬಹುಶಃ ನಾವು 'ಮಹಾ ವಿಕಾಸ ಆಘಾಡಿ' ಮೈತ್ರಿಯಲ್ಲಿ ಮುಂದುವರಿಯುವುದಿಲ್ಲ' ಎಂದೂ ಎಚ್ಚರಿಸಿದ್ದಾರೆ.
ಕಾಂಗ್ರೆಸ್ ಪಕ್ಷವು ರಾಹುಲ್ ಗಾಂಧಿ ಅವರು ಹೇಳಿಕೆಯನ್ನು ಬೆಂಬಲಿಸುತ್ತಿದೆ. 'ರಾಹುಲ್ ಅವರದು 'ಉದ್ದೇಶ ಪೂರ್ವಕವಾಗಿ ನೀಡಿದ ಹೇಳಿಕೆ'ಯಾಗಿರಲಿಲ್ಲ. ಬ್ರಿಟಿಷರ ವಿರುದ್ಧ ಹೋರಾಡಿದ ಬುಡಕಟ್ಟು ನಾಯಕ ಬಿರ್ಸಾ ಮುಂಡಾ ಅವರ ಕುರಿತು ಮಾತನಾಡುವಾಗ ಸಾವರ್ಕರ್ ವಿಷಯ ಪ್ರಸ್ತಾಪವಾಯಿತು. ರಾಹುಲ್ ಅವರು 'ಐತಿಹಾಸಿಕ ಸತ್ಯ'ವನ್ನು ಹೇಳಲು ಯತ್ನಿಸುತ್ತಿದ್ದರಷ್ಟೇ' ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.
'ರಾಹುಲ್ ಅವರ ಹೇಳಿಕೆಯು ಶಿವಸೇನಾ ಮತ್ತು ಕಾಂಗ್ರೆಸ್ ನಡು ವಿನ ಮೈತ್ರಿಯ ಮೇಲೆ ಯಾವ ಪರಿಣಾಮವನ್ನೂ ಬೀರುವುದಿಲ್ಲ. ಭಿನ್ನ ನಿಲುವನ್ನು ಗೌರವಿಸಲು ಇಬ್ಬರೂ ಒಪ್ಪಿಕೊಂಡಿದ್ದೇವೆ. ಸಂಜಯ್ ರಾವುತ್ ಅವರೊಂದಿಗೆ ಮಾತನಾಡಿದ್ದೇನೆ. 'ಐತಿಹಾಸಿಕ ವ್ಯಕ್ತಿ'ಗಳ ಕುರಿತ ಅಭಿಪ್ರಾಯವು ಮೈತ್ರಿಯ ಮೇಲೆ ಯಾವ ಪರಿಣಾಮವನ್ನೂ ಬೀರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ' ಎಂದರು.
ಸಾವರ್ಕರ್ ವಿಷಯ ಮಾತನಾ ಡುವ ಮೂಲಕ ಜೇನುಗೂಡಿಗೆ ಕೈ ಹಾಕಿ ದಂತಾಗಿದೆ ಎಂದು ಪಕ್ಷದ ಹಲವು ಮುಖಂಡರು ಅಭಿಪ್ರಾಯಪಟ್ಟಿದ್ದಾರೆ. ಯಾವುದೇ ವಿವಾದವಿಲ್ಲದೆ ಸಾಗುತ್ತಿದ್ದ 'ಭಾರತ್ ಜೋಡೊ ಯಾತ್ರೆ'ಯು ರಾಹುಲ್ ಗಾಂಧಿ ಅವರ ಈ ಹೇಳಿಕೆಯಿಂದಾಗಿ ವಿವಾದಕ್ಕೆ ಕಾರಣವಾಗಿದೆ.
ದಿನದ ಬೆಳವಣಿಗೆ
*
'ಕಾಂಗ್ರೆಸ್‌ನವರು ಭಾರತ ಜೋಡೊ ಯಾತ್ರೆ ಮಾಡುತ್ತಿದ್ದಾರೋ, ಭಾರತ ತೋಡೊ ಯಾತ್ರೆ
ಮಾಡುತ್ತಿದ್ದಾರೋ? ನನಗೆ ಅಚ್ಚರಿಯಾಗುತ್ತಿದೆ. ಕಾಂಗ್ರೆಸ್‌ಗೆ ದೇಶವನ್ನು ಒಡೆಯುವುದು
ಮಾತ್ರ ಗೊತ್ತಿದೆ, ಜೋಡಿಸುವುದು ಗೊತ್ತಿಲ್ಲ' ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ
ಜೆ.ಪಿ. ನಡ್ಡಾ ಹೇಳಿದ್ದಾರೆ.
* ಸಾವರ್ಕರ್ ಅವರ ಹುಟ್ಟೂರಾದ ನಾಸಿಕ್‌ನ ಬಾಗೂರ್‌ನಲ್ಲಿ ರಾಹುಲ್ ಗಾಂಧಿ ವಿರುದ್ಧ ಶುಕ್ರವಾರ ಪ್ರತಿಭಟನೆ ನಡೆಸಲಾಗಿದೆ. 'ರಾಹುಲ್ ಗಾಂಧಿ ಅವರು ಕ್ಷಮೆ ಕೇಳಬೇಕು. ಅಲ್ಲಿಯವರೆಗೂ ಗಾಂಧಿ ಕುಟುಂಬದ ಯಾರೊಬ್ಬರನ್ನು ಬಾಗೂರಿಗೆ ಬರಲು ಬಿಡುವುದಿಲ್ಲ' ಎಂದು ಬಿಜೆಪಿಯ ಮಂಡಲ ಅಧ್ಯಕ್ಷ ಪ್ರಸಾದ್ ಆಡಕೆ ಹೇಳಿದ್ದಾರೆ.
* ಪುಣೆಯಲ್ಲಿರುವ ಕಾಂಗ್ರೆಸ್ ಕಚೇರಿಗೆ ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕಿದರು. ರಾಹುಲ್ ಗಾಂಧಿ ಅವರ ಭಾವಚಿತ್ರಕ್ಕೆ ಮಸಿ ಬಳಿಯಲು ಯತ್ನಿಸಿದರು. ರಾಹುಲ್ ವಿರುದ್ಧ ಘೋಷಣೆಗಳನ್ನು ಕೂಗುತ್ತಾ, ಕಚೇರಿಯ ಗೋಡೆಗಳ ಮೇಲೆ 'ಮಾಫಿವೀರ್ ನೆಹರೂ' (ಕ್ಷಮಾಪಣೆ ಶೂರ ನೆಹರೂ) ಎಂದು ಬರೆದಿದ್ದ ಭಿತ್ತಿಪತ್ರಗಳನ್ನು ಅಂಟಿಸಿದರು.
* ರಾಹುಲ್ ಗಾಂಧಿ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಾಗಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಬಣದ ಶಿವಸೇನಾ ಕಾರ್ಯಕರ್ತೆ ವಂದನಾ ಡೊಂಗ್ರೆ ಅವರು ರಾಹುಲ್ ವಿರುದ್ಧ ಠಾಣೆಯ ಪೊಲೀಸರಿಗೆ ದೂರು ನೀಡಿದ್ದಾರೆ.