ಕಾಸರಗೋಡು : ಕೇರಳ ಶಾಲಾ ಕಲೋತ್ಸವವು ಶಾಲಾ ಮಕ್ಕಳ ಪ್ರತಿಭೆಗಳನ್ನು ಪ್ರದರ್ಶಿಸಲು ಇರುವ ಅತೀ ದೊಡ್ಡ ವೇದಿಕೆಯಾಗಿದೆ. ಇದು ದೇಶದಾದ್ಯಂತ ಅತೀ ಹೆಚ್ಚು ಜನ ಮನ್ನಣೆ ಪಡೆದ ಶಾಲಾ ಕಲೋತ್ಸವವೂ ಹೌದು. ಇಂತಹ ವೇದಿಕೆಯಲ್ಲಿ ಕನ್ನಡದ ಮಕ್ಕಳಿಗೆ ಸರಿಯಾದ ಅವಕಾಶಗಳು ಇಲ್ಲದೇ ಹೋದುದು ಇಲ್ಲಿನ ಕನ್ನಡಿಗರಿಗೆ ಅಸಮಾಧಾನವನ್ನು ತಂದಿತ್ತು. ಇದೀಗ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ (ರಿ.) ಕಾಸರಗೋಡು ಇದರ ನೇತಾರರ ಸಮಯೋಚಿತ ಕಾರ್ಯದಿಂದ ಹಾಗೂ ಕಾಸರಗೋಡು ಜಿಲ್ಲಾ ಶಿಕ್ಷಣ ಉಪ ನಿರ್ದೇಶಕರಾದ ಶ್ರೀಯುತ ವಾಸು ರವರನ್ನು ಚಾಯೋತ್ ಉನ್ನತ ಪ್ರೌಢ ಶಾಲೆಯಲ್ಲಿ ಭೇಟಿ ಮಾಡಿ ಕನ್ನಡ ಸ್ಪರ್ಧೆಗಳು ನಡೆಯುವುದೆಂದು ಖಚಿತಪಡಿಸುವುದರೊಂದಿಗೆ ಈ ವರ್ಷದ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಸಿಕ್ಕಂತಾಗಿದೆ.
ಈ ಹಿಂದೆ ನಡೆದಿರುವ ಶಾಲಾ
ಕಲೋತ್ಸವಗಳಲ್ಲಿ ಕನ್ನಡದ ಕೆಲವು ಸ್ಪರ್ಧೆಗಳನ್ನು ಮಾಡುವ ಮೂಲಕ ಕನ್ನಡದ ಮಕ್ಕಳಿಗೆ
ಉಪಜಿಲ್ಲೆ ಹಾಗೂ ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿತ್ತು.
ಆದರೆ ಈ ವರ್ಷ ಇದಕ್ಕೆ ಅವಕಾಶವನ್ನು ಕಲ್ಪಿಸದೆ ಕನ್ನಡ ಮಾಧ್ಯಮ ಶಾಲೆಗಳ ಮಕ್ಕಳ
ಆಕ್ರೋಶಕ್ಕೆ ಕಾರಣವಾಗಿತ್ತು.
ಉಪಜಿಲ್ಲಾ ಮಟ್ಟದಲ್ಲಿ
ಅಧಿಕಾರಿಗಳ ನಿರ್ಧಾರದಿಂದ ಕನ್ನಡ ಸ್ಪರ್ಧೆಗಳನ್ನು ಮಾಡಲು ಅವಕಾಶ ದೊರೆತರೂ ಜಿಲ್ಲಾ
ಮಟ್ಟದಲ್ಲಿ ನಡೆಯುವುದು ಅನುಮಾನವೆನಿಸಿತು. ಈ ಸಂಬಂಧ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ
ಅಧ್ಯಾಪಕರ ಸಂಘವು ಈ ಮೊದಲಿನಂತೆ ಕನ್ನಡ ಸ್ಪರ್ಧೆಗಳು ನಡೆಯುವಂತೆ ಮಾಡಲು ಕಾಸರಗೋಡು
ಜಿಲ್ಲಾ ಶಿಕ್ಷಣ ಉಪ ನಿರ್ದೇಶಕರಿಗೆ ಮನವಿಯನ್ನು ಸಲ್ಲಿಸಿತ್ತು. ಇದಕ್ಕೆ ಸರಿಯಾದ
ಸ್ಪಂದನೆ ಸಿಗದಿರುವುದರಿಂದ ಬಳಿಕ ಮಕ್ಕಳ ಹಕ್ಕುಗಳ ಆಯೋಗಕ್ಕೆ ದೂರನ್ನು ನೀಡಲಾಯಿತು.
ಇದರ ಸಂಬಂಧ ಮಕ್ಕಳ ಹಕ್ಕುಗಳ ಆಯೋಗವು ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಇಟ್ಟುಕೊಂಡು
ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ನೇತಾರರೊಂದಿಗೆ ಎರಡು ಬಾರಿ ಪರಿಶೀಲನಾ ಸಭೆ ನಡೆಸಿದೆ. ಆ
ಬಳಿಕ ಈ ಹಿಂದೆ ನಡೆದಂತೆ ಈ ವರ್ಷವೂ ಕನ್ನಡದ ಸ್ಪರ್ಧೆಗಳು ನಡೆಯುವಂತೆ ಮಕ್ಕಳ ಹಕ್ಕುಗಳ
ಆಯೋಗದ ಆದೇಶ ಸಂಖ್ಯೆ 10772/14/LA2/2022/KeSCPCR, ದಿನಾಂಕ 03-11-2022 ರಂತೆ
ಆದೇಶ ಹೊರಡಿಸಿ, ರಾಜ್ಯ ಶಿಕ್ಷಣ ಮಹಾ ನಿರ್ದೇಶಕರಿಗೆ ಹಾಗೂ ಕಾಸರಗೋಡು ಜಿಲ್ಲಾ ಶಿಕ್ಷಣ
ಉಪ ನಿರ್ದೇಶಕರಿಗೆ ಕಳುಹಿಸಲಾಗಿತ್ತು. ಹಾಗಾಗಿ ಈ ಹಿಂದೆ ನಡೆದಿರುವಂತೆ ಈ ವರ್ಷವೂ
ಕನ್ನಡದ ಸ್ಪರ್ಧೆಗಳು ನಡೆಯಬೇಕೆಂಬ ಆದೇಶದಿಂದ ಕನ್ನಡ ಸ್ಪರ್ಧಿಗಳು ಸಂತಸದಲ್ಲಿದ್ದರು.
ಆದರೆ ಮ್ಯಾನುವಲ್ ವಲ್ಲಿ ಇಲ್ಲದ ಕನ್ನಡ ಸ್ಪರ್ಧೆಗಳನ್ನು ಮಾಡಬಾರದೆಂದು
ಶಿಕ್ಷಣ ಇಲಾಖೆಯು ಮತ್ತೆ ತಡೆ ನೀಡಿದ ಹಿನ್ನೆಲೆಯಲ್ಲಿ ಕೂಡಲೇ ಕೇರಳ ಪ್ರಾಂತ್ಯ ಕನ್ನಡ
ಮಾಧ್ಯಮ ಅಧ್ಯಾಪಕರ ಸಂಘ ಕಾಸರಗೋಡು ಕೂಡಲೇ ಕಾರ್ಯ ಪ್ರವೃತ್ತರಾಗಿ, ಸಂಘಟನೆಯ ನೇತಾರರು
ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳಿಗೆ ಹಾಗೂ ನೇತಾರರನ್ನು ಸಂಪರ್ಕಿಸಿ, ಈ ವರ್ಷವೂ ಕನ್ನಡ
ಸ್ಪರ್ಧೆಗಳು ಕಾಸರಗೋಡು ಜಿಲ್ಲಾ ಮಟ್ಟದಲ್ಲಿ ನಡೆಯುವಂತೆ ಪ್ರಯತ್ನಿಸಿ ಯಶಸ್ಸನ್ನು
ಕಂಡಿದ್ದಾರೆ.
ಈ ಸಮಸ್ಯೆ ಇತ್ಯರ್ಥ ಆಗಲು
ಸಹಕರಿಸಿದ ಮಂಜೇಶ್ವರದ ಶಾಸಕರಾದ ಎ.ಕೆ.ಎಂ ಅಶ್ರಫ್, ಕಾಸರಗೋಡಿನ ಶಾಸಕರಾದ ಎನ್.ಎ
ನೆಲ್ಲಿಕುನ್ನು ಹಾಗೂ ವಿವಿಧ ಸಂಘಟನೆಯ ನೇತಾರರನ್ನು ಕನ್ನಡ ಮಾಧ್ಯಮ ಅಧ್ಯಾಪಕರ ಸಂಘವು
ಕೃತಜ್ಞತೆ ಸಲ್ಲಿಸಿ ಅಭಿನಂದಿಸಿದೆ.
ಈಗ
ನಡೆಯುತ್ತಿರುವ ಹೆಚ್ಚಿನ ಕನ್ನಡದ ಸ್ಪರ್ಧೆಗಳು ಕಲೋತ್ಸವದ ಮ್ಯಾನುವಲ್ ನಲ್ಲಿ ಸೇರ್ಪಡೆ
ಆಗದಿರುವದರಿಂದ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲು ಮಕ್ಕಳು ಅವಕಾಶ
ವಂಚಿತರಾಗುತ್ತಿದ್ದಾರೆ. ಇದರಿಂದ ಅವರಿಗೆ ದೊರಕುವ ಗ್ರೇಸ್ ಮಾರ್ಕ್ ಕನ್ನಡದ ಮಕ್ಕಳಿಗೆ
ಇಲ್ಲದಂತಾಗುತ್ತಿದೆ. ಇದನ್ನು ಬಗೆಹರಿಸಲು ಸ್ಥಳೀಯ ಶಾಸಕರು ಹಾಗೂ ವಿವಿಧ ಸಂಘಟನೆಯ
ನೇತಾರರ ಬೆಂಬಲದೊಂದಿಗೆ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘವು ಕನ್ನಡದ
ಸ್ಪರ್ಧೆಗಳು ಕಲೋತ್ಸವದ ಮ್ಯಾನುವಲ್ ನಲ್ಲಿ ಬರುವಂತೆ ಮಾಡಲು ಬರುವ ವರ್ಷವೇ
ಪ್ರಯತ್ನಿಸಲಾಗುವುದು ಎಂದು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಕಾಸರಗೋಡು
ಇದರ ಕೇಂದ್ರ ಸಮಿತಿಯ ಅಧ್ಯಕ್ಷರಾದ ಪಿ. ಬಿ ಶ್ರೀನಿವಾಸ ರಾವ್ ತಿಳಿಸಿರುತ್ತಾರೆ.