ನವದೆಹಲಿ: ಸಹಜೀವನ ಸಂಗಾತಿ ಬರ್ಬರ ಹತ್ಯೆ ಮಾಡಿದ ಆರೋಪಿ ಅಫ್ತಾಬ್ ಅಮೀನ್ ಪೂಲಾವಾಲಾನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲು ದೆಹಲಿ ನ್ಯಾಯಾಲಯವು ಗುರುವಾರ ಮತ್ತೆ ಐದು ದಿನಗಳವರೆಗೆ ಮಹರೌಲಿ ನಗರ ಪೊಲೀಸ್ ಕಸ್ಟಡಿಗೆ ನೀಡಿದ್ದು, ಅಫ್ತಾಬ್ ಮಂಪರು ಪರೀಕ್ಷೆಗೂ ಅನುಮತಿ ಕೊಟ್ಟಿದೆ.
ಈ ಪ್ರಕರಣ ಸಂಬಂಧ ಪೊಲೀಸರು ಆರೋಪಿಯ ಮಂಪರು ಪರೀಕ್ಷೆ ನಡೆಸಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಅವಿರಲ್ ಶುಕ್ಲಾ ಅವರು ಆದೇಶ ಹೊರಡಿಸಿದರು.
ಅಫ್ತಾಬ್‌ಗೆ ಮರಣದಂಡನೆ: ವಕೀಲರ ಆಗ್ರಹ
ಪೊಲೀಸ್ ಕಸ್ಟಡಿಯಲ್ಲಿರುವ ಆರೋಪಿ ಅಫ್ತಾಬ್‌ಗೆ ಮರಣ ದಂಡನೆ ವಿಧಿಸುವಂತೆ ಒತ್ತಾಯಿಸಿ ಸಾಕೇತ್ ಜಿಲ್ಲಾ ನ್ಯಾಯಾಲಯಗಳ ವಕೀಲರ ಸಮೂಹ ಗುರುವಾರ ಪ್ರತಿಭಟನೆ ನಡೆಸಿತು.
ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅವಿರಲ್ ಶುಕ್ಲಾ ಅವರ ಎದುರು ಆರೋಪಿಯನ್ನು ಹಾಜರುಪಡಿಸುವ ಮಾಹಿತಿ ಹೊರಬಿದ್ದಂತೆ, ನ್ಯಾಯಾಲಯದ ಆವರಣದಲ್ಲಿ ಮಧ್ಯಾಹ್ನ 3 ಗಂಟೆ ಸುಮಾರಿಗೆ ವಕೀಲರ ಗುಂಪು ಜಮಾಯಿಸಿತು.
ಪ್ರತಿಭಟನನಿರತರ ಪರ ಮಾತನಾಡಿದ ಸುರೇಂದ್ರ ಕುಮಾರ್, 'ಆರೋಪಿಯ ಘೋರ ಅಪರಾಧದ ವಿರುದ್ಧ ಪ್ರತಿಭಟಿಸುತ್ತಿದ್ದೇವೆ. ಈ ಪ್ರಕರಣ ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆ ನಡೆದು, ಆದಷ್ಟು ಶೀಘ್ರ ಆರೋಪಿಗೆ ಶಿಕ್ಷೆಯಾಗಬೇಕು' ಎಂದು ಹೇಳಿದರು.
ಆರೋಪಿಯನ್ನು ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ಕೋರ್ಟ್‌ಗೆ ಹಾಜರುಪಡಿಸಲು ದೆಹಲಿ ಪೊಲೀಸರಿಗೆ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅವರು ಬುಧವಾರವೇ ಅನುಮತಿ ನೀಡಿದ್ದರು.