ಕಾಸರಗೋಡು: ದೇವಸ್ಥಾನದಿಂದ ವಿಗ್ರಹಕ್ಕೆ ತೊಡಿಸಿದ ಚಿನ್ನಾಭರಣವನ್ನು ಸ್ವತ: ಅರ್ಚಕ ಕಳವುಗೈದು ಪರಾರಿಯಾದ ಘಟನೆ ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಹೊಸಬೆಟ್ಟುವಿನಲ್ಲಿ ನಡೆದಿದೆ. ಇಲ್ಲಿನ ಶ್ರೀ ಮಂಗೇಶ ಮಹಾಲಕ್ಷ್ಮೀ ಶಾಂತದುರ್ಗಾ ದೇವಸ್ಥಾನದಿಂದ ವಿಗ್ರಹಕ್ಕೆ ತೊಡಿಸಲಾದ ಐದುವರೆ ಪವನು ಚಿನ್ನವನ್ನು ಎಗರಿಸಿದ ಅರ್ಚಕ, ದೇವರಿಗೆ ಅದೇ ಮಾದರಿಯ ಗಿಲೀಟಿನ ಆಭರಣ ತೊಡಿಸಿ ಪರಾರಿಯಾಗಿದ್ದಾನೆ.
ದೇವಸ್ಥಾನದಲ್ಲಿ ಪೂಜೆಗಾಗಿ ನೇಮಿಸಲಾದ ತಿರುವನಂತಪುರ ನಿವಾಸಿ ದೀಪಕ್ ನಂಬೂದಿರಿ ಚಿನ್ನದೊಂದಿಗೆ ಪರಾರಿಯಾಗಿದ್ದು, ಈತನ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಅ. 27ರಿಂದ ಈತನನ್ನು ಇಲ್ಲಿ ಪೂಜೆಗೆ ನೇಮಿಸಲಾಗಿದ್ದು, 29ರಂದು ಸಂಜೆ ಹೊಸಂಗಡಿ ಪೇಟೆಗೆ ತೆರಳುವುದಾಗಿ ದೇವಸ್ಥಾನದ ಸೆಕ್ಯೂರಿಟಿಗೆ ತಿಳಿಸಿ ತೆರಳಿದವ ವಾಪಸಾಗಿರಲಿಲ್ಲ. ಈತನ ಮೊಬೈಲ್ ಸ್ವಿಚ್‍ಆಫ್ ಆಗಿತ್ತು. ಈ ಹಿನ್ನೆಲೆಯಲ್ಲಿ ಪೂಜೆಗಾಗಿ ಸಿದ್ಧಾಪುರದ ಶ್ರೀಧರ ಭಟ್ ಎಂಬವರನ್ನು ನೇಮಿಸಲಾಗಿದ್ದು, ಇವರು ಪೂಜೆಗೆ ಗರ್ಭಗುಡಿಗೆ ತೆರಳಿದಾಗ ದೇವರ ವಿಗ್ರಹದಲ್ಲಿ ಹೊಳಪಿನಿಂದ ಕೂಡಿದ ಹೊಸ ಆಭರಣ ಕಂಡುಬಂದಿದ್ದು, ಈ ಬಗ್ಗೆ ಮೊಕ್ತೇಸರರಲ್ಲಿ ವಿಚಾರಿಸಿದಾಗ ಆಭರಣ ಬದಲಾಗಿರುವುದು ಗಮನಕ್ಕೆ ಬಂದಿತ್ತು. ಚಿನ್ನದ ಆಭರಣ ಅಪಹರಿಸಿ, ಗಿಲೀಟಿನ ಆಭರಣ ತೊಡಿಸಿ ಅರ್ಚಕ ಪರಾರಿಯಾಗಿರುವುದಾಗಿ ಮನವರಿಕೆಯಾಗಿದೆ. ಐದುವರೆ ಪವನು ಚಿನ್ನ ಕಳವಾಗಿರುವ ಬಗ್ಗೆ ದೇವಸ್ಥಾನದ ಮೊಕ್ತೇಸರ ಎಂ. ದೀಪಕ್ ರಾವ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.