HEALTH TIPS

'ದಿ ಕಾಶ್ಮೀರ್‌ ಫೈಲ್ಸ್‌': ಲ್ಯಾಪಿಡ್‌ ಟೀಕೆಗೆ ಕ್ಷಮೆಯಾಚಿಸಿದ ಇಸ್ರೇಲ್‌

 

               ನವದೆಹಲಿ: 'ವಿವೇಕ್‌ ಅಗ್ನಿಹೋತ್ರಿ ನಿರ್ದೇಶನದ 'ದಿ ಕಾಶ್ಮೀರ್‌ ಫೈಲ್ಸ್‌' ಹಿಂದಿ ಚಿತ್ರದ ಕುರಿತ ಚರ್ಚೆಯು ಭಾರತ ಮತ್ತು ಇಸ್ರೇಲ್ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸುತ್ತದೆ. ಈ ಚಿತ್ರದ ಕುರಿತು 53ನೇ ಇಫಿ ಜ್ಯೂರಿ ಮುಖ್ಯಸ್ಥ ನಾದವ್‌ ಲಾಪಿಡ್ ಮಾಡಿರುವ ಟೀಕೆ ಸಮರ್ಥನೀಯವಲ್ಲ' ಎಂದು ಇಸ್ರೇಲ್ ಕಾನ್ಸುಲ್ ಜನರಲ್ ಕೊಬ್ಬಿ ಶೋಶಾನಿ ಮಂಗಳವಾರ ಹೇಳಿದರು.

                ಮುಂಬೈನಲ್ಲಿ ಮಂಗಳವಾರ ನಟ ಅನುಪಮ್‌ ಖೇರ್‌ ಅವರೊಂದಿಗೆ ಪತ್ರಿಕಾಗೋಷ್ಠಿ ನಡೆಸಿದ ಅವರು, 'ನಾನು ಬೆಳಿಗ್ಗೆ ಮೊದಲು ಕರೆ ಮಾಡಿದ್ದು ಅನುಪಮ್ ಖೇರ್ ಅವರಿಗೆ. ಲಾಪಿಡ್‌ ಅವರ ವಿವಾದಿತ ಟೀಕೆ, ಅವರ ವೈಯಕ್ತಿಕ ಹೇಳಿಕೆಗಾಗಿ ನನ್ನ ಸ್ನೇಹಿತ ಅನುಪಮ್‌ ಬಳಿ ಕ್ಷಮೆಯಾಚಿಸಿರುವೆ. ಲಾಪಿಡ್‌ ಹೇಳಿಕೆಗೂ ಇಸ್ರೇಲ್‌ಗೂ ಅಧಿಕೃತ ಮತ್ತು ಅನಧಿಕೃತವಾಗಿಯೂ ಯಾವುದೇ ಸಂಬಂಧವಿಲ್ಲ' ಎಂದು ತಿಳಿಸಿದರು.

                  'ದಿ ಕಾಶ್ಮೀರ್‌ ಫೈಲ್ಸ್‌ ಚಿತ್ರವು ರಾಜಕೀಯ ಪ್ರಚಾರ ಉದ್ದೇಶದ ಚಿತ್ರವಲ್ಲ. ಕಾಶ್ಮೀರಿ ಪಂಡಿತರ ಸಂಕಷ್ಟಗಳನ್ನು ತೆರೆದಿಡುವ ಗಟ್ಟಿ ಚಿತ್ರ. ನಾದವ್‌ ಟೀಕೆಯಿಂದ ನಾವು (ಇಸ್ರೇಲ್‌) ಅಂತರ ಕಾಯ್ದುಕೊಂಡಿದ್ದೇವೆ. ಆದರೆ, ಅವರ ವಿವಾದಾತ್ಮಕ ಹೇಳಿಕೆ ಉಭಯ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಿದೆ' ಎಂದು ಶೋಶಾನಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

                'ಲಾಪಿಡ್ ಹೇಳಿಕೆಯಿಂದ ನನ್ನ ಹೃದಯ ಒಡೆದಿದೆ. ಇದು ಹಾನಿಕಾರಕ ಎನ್ನುವುದನ್ನು ನಾವು ಖಂಡಿತವಾಗಿಯೂ ಒಪ್ಪಿಕೊಳ್ಳಬೇಕು. ನಮ್ಮ ರಾಯಭಾರಿ ಮತ್ತು ನಾನು ಬೆಳಿಗ್ಗೆಯೇ ಇದನ್ನು ಸ್ಪಷ್ಟಪಡಿಸಿರುವೆವು. ಕಾಶ್ಮೀರಿ ಪಂಡಿತರು ಅನುಭವಿಸಿದ ನೋವಿನ ಬಗ್ಗೆ ಪ್ರಶ್ನೆ ಎದ್ದಿರುವುದು ಒಳ್ಳೆಯದೇ. ಭಾರತದ ನನ್ನ ಸ್ನೇಹಿತರಿಗೆ ನನ್ನ ಬೆಂಬಲ ನೀಡಲು ನಾನು ಇಲ್ಲಿಗೆ ಬಂದಿದ್ದೇನೆ. ಭಾರತ ಮತ್ತು ಇಸ್ರೇಲ್ ಪೂರ್ಣ ಪ್ರಜಾಪ್ರಭುತ್ವ ದೇಶಗಳು. ಎರಡೂ ದೇಶಗಳಲ್ಲಿ ಇರುವ ವಾಕ್ ಸ್ವಾತಂತ್ರ್ಯ ಬಹಳ ಮುಖ್ಯವಾದುದು' ಎಂದು ಶೋಶಾನಿ ಹೇಳಿದರು.

             ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿರುವ ಅನುಪಮ್‌ ಖೇರ್‌ ಅವರು ಕಾಶ್ಮೀರಿ ಪಂಡಿತರನ್ನು ಮತ್ತು ಅಲ್ಲಿನ ಸ್ಥಿತಿ ಏನಾಗಿದೆ ಎಂಬುದನ್ನು ಅವರ ಪಾತ್ರವೂ ಪ್ರತಿನಿಧಿಸುತ್ತದೆ ಎಂದು ಅವರು ಹೇಳಿದರು.

              ಶೋಶಾನಿ ಅವರ ಈ ಹೇಳಿಕೆಯನ್ನು ಸಮ್ಮತಿಸಿದ ನಟ ಅನುಪಮ್‌ ಖೇರ್‌, 'ಇಸ್ರೇಲಿ ಚಿತ್ರ ನಿರ್ದೇಶಕ ನಾದವ್‌ ಲಾಪಿಡ್‌ ಒಬ್ಬ ಅಸಭ್ಯ ಮತ್ತು ಅವಕಾಶವಾದಿ ವ್ಯಕ್ತಿ' ಎಂದು ವಾಗ್ದಾಳಿ ಮಾಡಿದರು.

              'ಕೆಲವೊಬ್ಬರು ಕೆಲವು ವಿಷಯಗಳನ್ನು ಯಾವಾಗ ವಿರೋಧಿಸುತ್ತಾರೋ ಆಗ ಉಭಯತ್ರರ ಬಾಂಧವ್ಯ ಎಷ್ಟೊಂದು ಗಟ್ಟಿ ಎನ್ನುವುದು ಕಾಣಿಸುತ್ತದೆ. ಇಸ್ರೇಲ್‌ನ ಕಾನ್ಸುಲ್‌ ಜನರಲ್‌ ಅವರೇ ಇಲ್ಲಿಗೆ ಬಂದು, ಉಭಯ ರಾಷ್ಟ್ರಗಳ ಬಾಂಧವ್ಯ ಎಂತ‌ಹುದೆಂಬುದನ್ನು ಸಾಬೀತು‍ಪಡಿಸಿದ್ದಾರೆ. ಉಭಯತ್ರರ ಸಂಬಂಧ ನೋವಿನದು, ಏಕೆಂದರೆ ಎರಡೂ ದೇಶಗಳು ವಲಸೆ ಮತ್ತು ಹತ್ಯಾಕಾಂಡ ಅನುಭವಿಸಿವೆ, ಅದು ಸತ್ಯ' ಎಂದು ಅನುಪಮ್‌ ಖೇರ್‌ ಹೇಳಿದರು.

              'ನಿಮಗೆ ಚಿತ್ರ ಇಷ್ಟವಾಗದಿದ್ದರೆ ಅದನ್ನು ಹೇಳುವುದು ಸ್ವಾಗತಾರ್ಹ. ಆದರೆ ನೀವು, ಜ್ಯೂರಿ ಆಗಿದ್ದಾಗ 'ಅಸಭ್ಯ', 'ರಾಜಕೀಯ ಪ್ರಚಾರದ ಉದ್ದೇಶ' ಇಂತಹ ಪದ ಬಳಸುವಂತಿಲ್ಲ. ಕಳೆದ 32 ವರ್ಷಗಳಿಂದ ಕಾಶ್ಮೀರಿ ಪಂಡಿತರು ಅನುಭವಿಸುತ್ತಿರುವ ನೋವು ಮತ್ತು ಸಮಸ್ಯೆಗಳನ್ನು ಜಗತ್ತು ಈ ಚಿತ್ರದ ಮೂಲಕ ಗುರುತಿಸಿದೆ' ಎಂದು ಅವರು, ನಾದವ್‌ಗೆ ತಿರುಗೇಟು ನೀಡಿದರು.

                'ದಿ ಕಾಶ್ಮೀರ್‌ ಫೈಲ್ಸ್‌ ಚಿತ್ರವು ಅಸಭ್ಯ ಮತ್ತು ಕೀಳು ಅಭಿರುಚಿ ಹೊಂದಿದೆ. ರಾಜಕೀಯ ಪ್ರಚಾರ ಉದ್ದೇಶದ ಈ ಚಿತ್ರವು ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸ್ಪರ್ಧಿಸಲು ಯೋಗ್ಯವಲ್ಲ. ಈ ಚಿತ್ರ ಪ್ರದರ್ಶನವಾದಾಗ ಆಘಾತವಾಯಿತು. ವಿಚಲಿತಗೊಂಡೆ' ಎಂದು ಗೋವಾದಲ್ಲಿ ಸೋಮವಾರ ರಾತ್ರಿ ನಡೆದ ಇಫ್ಫಿ ಸಮಾರೋಪದಲ್ಲಿ ನಾದವ್‌ ಲಾಪಿಡ್‌ ಹೇಳಿದ್ದರು.

             ಈ ವೇದಿಕೆಯಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್‌ ಠಾಕೂರ್, ನಟ ಅಕ್ಷಯ್‌ ಕುಮಾರ್‌ ಮತ್ತು ಹಿರಿಯ ನಟಿ, ನಿರ್ದೇಶಕಿ ಆಶಾ ಪಾರೇಖ್‌ ಅವರೂ ಇದ್ದರು.

                   ನಾದವ್‌ ಅವರ ಟೀಕೆ ವಿವಾದ ಎಬ್ಬಿಸಿದ ಬೆನ್ನಲ್ಲೇ ಚಿತ್ರರಂಗದ ಗಣ್ಯರು ಹಾಗೂ ಬಿಜೆಪಿ, ಕಾಂಗ್ರೆಸ್‌ ನಾಯಕರೂ ನಾದವ್‌ ಹೇಳಿಕೆಯ ವಿರುದ್ಧ ಹರಿಹಾಯ್ದಿದ್ದಾರೆ.

                                      ನಾದವ್‌ಗೆ ಇಸ್ರೇಲ್‌ ರಾಯಭಾರಿ ತರಾಟೆ

               ನಾದವ್‌ ಲಾಪಿಡ್‌ ಅವರ ಹೇಳಿಕೆಯನ್ನು ವಿರೋಧಿಸಿ ಟ್ವಿಟರ್‌ನಲ್ಲಿ ಬಹಿರಂಗ ಪತ್ರ ಬರೆದಿರುವ ಭಾರತದಲ್ಲಿನ ಇಸ್ರೇಲ್ ರಾಯಭಾರಿ ನಔರ್‌ ಗಿಲೋನ್‌, 'ಆತ ದೇಶ ವಿರೋಧಿ ನಿರ್ದೇಶಕ. ತೀರ್ಪುಗಾರ ಮುಖ್ಯಸ್ಥನಾಗಲು ಭಾರತ ನೀಡಿದ ಆಹ್ವಾನವನ್ನು ಕೆಟ್ಟ ರೀತಿ ದುರುಪಯೋಗಪಡಿಸಿಕೊಂಡಿದ್ದಾರೆ. ಭಾರತದ ನಂಬಿಕೆ, ಗೌರವ ಮತ್ತು ಆತಿಥ್ಯಕ್ಕೆ ದ್ರೋಹ ಬಗೆದಿರುವುದಕ್ಕೆ ಆತನಿಗೆ ನಾಚಿಕೆಯಾಗಬೇಕು' ಎಂದು ವಾಗ್ದಾಳಿ ಮಾಡಿದ್ದಾರೆ.

              'ದಿ ಕಾಶ್ಮೀರ್ ಫೈಲ್ಸ್' ಚಿತ್ರ ಕಾಶ್ಮೀರ ಪಂಡಿತರ ಸಮಸ್ಯೆಯ ಸೂಕ್ಷ್ಮತೆ ತೆರೆದಿಡುತ್ತದೆ. ನಾದವ್‌ ಹೇಳಿಕೆ ವೈಯಕ್ತಿಕವಾದುದು. ಅದು ಖಂಡನೀಯ. ಇದಕ್ಕೆ ಯಾವುದೇ ಸಮರ್ಥನೆ ಇಲ್ಲ. ಭಾರತದಲ್ಲಿ 'ಶ್ಲಿಂಡರ್‌ ಲಿಸ್ಟ್‌' ಹತ್ಯಾಕಾಂಡವನ್ನು ಸಂಶಯದಿಂದ ನೋಡುವಂತೆ ಮಾಡಿದ್ದೀರಿ. ಅವಮಾನ ಮಾಡಿದ್ದೀರಿ. ಆ ಹತ್ಯಾಕಾಂಡದಲ್ಲಿ ಬದುಕುಳಿದವರ ಮಗನಾಗಿ ನನಗೆ ತುಂಬಾ ನೋವುಂಟು ಮಾಡಿದೆ' ಎಂದು ಕಿಡಿಕಾರಿದ್ದಾರೆ.

              ಚಿತ್ರ ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ ಅವರು 1990ರ ದಶಕದ ಆರಂಭದಲ್ಲಿ ಭಯೋತ್ಪಾದನೆಯಿಂದ ಕಾಶ್ಮೀರಿ ಪಂಡಿತರ ವಲಸೆ ಸಮಸ್ಯೆಯನ್ನು ಕೇಂದ್ರವಾಗಿಟ್ಟುಕೊಂಡು ಚಿತ್ರಿಸಿರುವ 'ದಿ ಕಾಶ್ಮೀರ್‌ ಫೈಲ್ಸ್‌' ಚಿತ್ರವನ್ನು ಆಸ್ಕರ್‌ ವಿಜೇತ ನಿರ್ದೇಶಕ ಸ್ಟೀವನ್ ಸ್ಪೀಲ್ ಬರ್ಗ್‌ ಅವರ 'ಶಿಂಡ್ಲರ್ ಲಿಸ್ಟ್‌' (ಹತ್ಯಾಕಾಂಡದ ಮಹಾಕಾವ್ಯ) ಚಿತ್ರಕ್ಕೆ ಹೋಲಿಸಿದ್ದರು.

                 ಮಾರ್ಚ್ 11 ರಂದು ದೇಶದಾದ್ಯಂತ ಬಿಡುಗಡೆಯಾದ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ, 53ನೇ ಇಫಿಯ ಭಾರತೀಯ ಪನೋರಮಾ ವಿಭಾಗದಲ್ಲಿ ನ. 22ರಂದು ಪ್ರದರ್ಶನ ಕಂಡಿತ್ತು.


ಯಾರು ಏನು ಹೇಳಿದರು?

ನಾದವ್‌ ಹೇಳಿಕೆ ಕಾಶ್ಮೀರಿ ಪಂಡಿತರು ಎದುರಿಸಿದ ಭಯಾನಕತೆಗೆ ಮಾಡಿದ ಅಪಮಾನವಾಗಿದೆ. ಹಿಟ್ಲರ್ ಲಕ್ಷಾಂತರ ಯಹೂದಿಗಳನ್ನು ಕೊಂದಿದ್ದೂ, ಆ ಹತ್ಯಾಕಾಂಡ ಆಧರಿಸಿದ, ಆಸ್ಕರ್‌ ವಿಜೇತ 'ಶ್ಲಿಂಡರ್‌ ಲಿಸ್ಟ್‌' ಚಿತ್ರವೂ ಪ್ರಚಾರದ ಗೀಳೆ?

- ಅಮಿತ್ ಮಾಳವೀಯಾ, ಬಿಜೆಪಿ ರಾಷ್ಟ್ರೀಯ ವಕ್ತಾರ

ನಾದವ್‌ ಹೇಳಿಕೆಯು ಕೇಂದ್ರಾಡಳಿತ ಪ್ರಾಂತ್ಯದ ಈ ನೆಲದ ವಾಸ್ತವ ಪರಿಸ್ಥಿತಿಯ ಬಗ್ಗೆ ಅವರಿಗಿರುವ ಜ್ಞಾನದ ಕೊರತೆಯನ್ನು ಬಿಂಬಿಸುತ್ತದೆ.

- ರವೀಂದರ್‌ ರೈನಾ, ಜಮ್ಮು ಮತ್ತು ಕಾಶ್ಮೀರ ಬಿಜೆಪಿ ಅಧ್ಯಕ್ಷ

ಮೋದಿ ಸರ್ಕಾರ ಮತ್ತು ಬಿಜೆಪಿ ಮುತುವರ್ಜಿ ವಹಿಸಿ ಪ್ರಚಾರ ಮಾಡಿದ್ದ 'ದಿ ಕಾಶ್ಮೀರ್ ಫೈಲ್ಸ್' ಅಂತರರಾಷ್ಟ್ರೀಯ ಚಿತ್ರೋತ್ಸವದಿಂದ ತಿರಸ್ಕೃತಗೊಂಡಿದೆ. ಜ್ಯೂರಿಯ ಟೀಕೆಗೂ ಗುರಿಯಾಗಿದೆ

- ಸುಪ್ರಿಯಾ ಶ್ರೀನಾಥೆ, ಕಾಂಗ್ರೆಸ್ ವಕ್ತಾರೆ ಮತ್ತು ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥೆ

ದೇಶದ ಜನರನ್ನು ಧ್ರುವೀಕರಿಸಲು ಬಿಜೆಪಿ ಸರ್ಕಾರವು ಈ ಸಿನಿಮಾಕ್ಕೆ ಪ್ರಚಾರ ನೀಡಿತು. ಇದರ ಪರಿಣಾಮ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತ ಭಾರಿ ಮುಜುಗರ ಅನುಭವಿಸಬೇಕಾಯಿತು

- ಶಮಾ ಮೊಹಮ್ಮದ್, ಕಾಂಗ್ರೆಸ್ ವಕ್ತಾರೆ

ಇಸ್ರೇಲಿ ಚಿತ್ರನಿರ್ದೇಶಕ ನಾದವ್‌ ಸೇರಿ ಬುದ್ಧಿಜೀವಿಗಳು 'ದಿ ಕಾಶ್ಮೀರ್‌ ಫೈಲ್ಸ್‌'ನಲ್ಲಿ ಚಿತ್ರಿಸಿರುವ ಘಟನೆಗಳು ಸುಳ್ಳೆಂದು ಸಾಬೀತುಪಡಿಸಿದರೆ ಸಿನಿಮಾ ಮಾಡುವುದನ್ನೇ ನಿಲ್ಲಿಸುವೆ

- ವಿವೇಕ್‌ ಅಗ್ನಿಹೋತ್ರಿ, ಚಿತ್ರನಿರ್ದೇಶಕ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries