ಖೇಡಾ: ಗುಜರಾತ್‌ನಲ್ಲಿ ವಿಧಾನಸಭೆ ಚುನಾವನೆ ಸಮೀಪಿಸುತ್ತಿರುವ ಬೆನ್ನಲ್ಲೇ ವಿವಿಧ ಪಕ್ಷಗಳ ರಾಜಕೀಯ ನಾಯಕರು ಪಕ್ಷಾಂತರ ಮಾಡುತ್ತಿದ್ದಾರೆ.
ಸದ್ಯ ಬಿಜೆಪಿಯ ಮಾಜಿ ಸಂಸದ ಪ್ರಭಾತ್ ಸಿಂಹ ಚೌಹಾಣ್ ಕಾಂಗ್ರೆಸ್ ಪಕ್ಷ ಸೇರಿದ್ದಾರೆ.
ಇಲ್ಲಿನ ಖೇಡಾ ಜಿಲ್ಲೆಯಲ್ಲಿ ನಡೆಯುತ್ತಿರುವ ಪರಿವರ್ತನಾ ಯಾತ್ರೆಯ ವೇಳೆ ಇವರು ಪಕ್ಷ ಸೇರ್ಪಡೆಯಾದರು.
ಕಾಂಗ್ರೆಸ್ ಪಕ್ಷದಲ್ಲಿದ್ದ ಅವರು 1995ರಲ್ಲಿ ಬಿಜೆಪಿ ಸೇರಿದ್ದರು. ಅವರು ಎರಡು ಸಲ ಕಾಂಗ್ರೆಸ್ ಶಾಸಕರಾಗಿಯೂ ಕೆಲಸ ಮಾಡಿದ್ದಾರೆ.
ಬಿಜೆಪಿ ಸೇರಿದ ಬಳಿಕ 1995, 1998 ಮತ್ತು 2002ರಲ್ಲಿ ಕಲೋಲ್ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಿ ಭರ್ಜರಿ ಗೆಲುವು ದಾಖಲಿಸಿದ್ದರು. ನಂತರ 2009 ಮತ್ತು 2014ರಲ್ಲಿ ಪಂಚಮಹಲ್ ಸಂಸತ್ ಕ್ಷೇತ್ರದಿಂದ ಆಯ್ಕೆಯಾಗಿದ್ದರು.
ಇದೀಗ ಅವರು ಬಿಜೆಪಿಯಿಂದ ಅಸಮಾಧಾನಗೊಂಡು ಕಾಂಗ್ರೆಸ್ ಪಕ್ಷ ಸೇರಿದ್ದಾರೆ.