ನವದೆಹಲಿ: ದರೋಡೆಕೋರ-ಭಯೋತ್ಪಾದಕ ಜಾಲ ಬೆನ್ನತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮಂಗಳವಾರ ಬೆಳಿಗ್ಗೆ ದೆಹಲಿ, ಹರಿಯಾಣ ಮತ್ತು ಇತರ ರಾಜ್ಯಗಳಲ್ಲಿ ದಾಳಿ ಪ್ರಾರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವಾರ ಲಾರೆನ್ಸ್ ಬಿಷ್ಣೋಯ್, ನವೀನ್ ದಬಾಸ್ ಮತ್ತು ಸುನಿಲ್ ಬಲಿಯಾನ್ ಅಲಿಯಾಸ್ ಟಿಲ್ಲು ತಾಜ್ಪುರಿಯಾ ಎಂಬ ಮೂರು ದರೋಡೆಕೋರರನ್ನು ಕಸ್ಟಡಿಗೆ ತೆಗೆದುಕೊಂಡಿದ್ದ ಎನ್‌ಐಎ, ಪಂಜಾಬ್ ಮತ್ತು ರಾಜಸ್ಥಾನದಾದ್ಯಂತ ಕೂಡ ದಾಳಿ ನಡೆಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ.
ಕಳೆದ ತಿಂಗಳು, ನೆಕ್ಸಸ್‌ನ ತನಿಖೆಯನ್ನು ತೀವ್ರಗೊಳಿಸುವ ಪ್ರಯತ್ನದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ಇದೇ ರೀತಿ ದಾಳಿ ನಡೆಸಿತ್ತು. ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನದಲ್ಲಿ ಇತರ ರಾಜ್ಯಗಳಲ್ಲಿನ 50ಕ್ಕೂ ಅಧಿಕ ಸ್ಥಳಗಳಲ್ಲಿ ದಾಳಿ ನಡೆಸಿ ದರೋಡೆಕೋರರಿಗೆ ಭಯೋತ್ಪಾದಕರು ಮತ್ತು ಮಾದಕವಸ್ತು ಕಳ್ಳಸಾಗಣೆದಾರರೊಂದಿಗಿನ ಸಂಪರ್ಕದ ಬಗ್ಗೆ ವಿವರಗಳನ್ನು ಪಡೆದಿತ್ತು. ರಾಜಸ್ಥಾನದಲ್ಲಿ, ಚುರುವಿನ ಸಂಪತ್ ನೆಹ್ರಾ ಅವರಿಗೆ ಸೇರಿದ ಸ್ಥಳಗಳಲ್ಲಿ ದಾಳಿ ವರದಿಯಾಗಿದೆ. ಪಂಜಾಬ್‌ನಲ್ಲಿ, ವಕೀಲ ಗುರುಪ್ರೀತ್ ಸಿಂಗ್ ಸಿಧು, ಕಬಡ್ಡಿ ಪ್ರವರ್ತಕ ಜಗ್ಗಾ ಜಾಂಡಿಯನ್ ಮತ್ತು ಆರೋಪಿತ ದರೋಡೆಕೋರ ಜಮನ್ ಸಿಂಗ್ ಅವರ ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿತ್ತು.
ಭಯೋತ್ಪಾದಕ ಜಾಲ ಮತ್ತು ಅವುಗಳಿಗೆ ಧನಸಹಾಯ ಮತ್ತು ಮೂಲಸೌಕರ್ಯಗಳನ್ನು ಒದಗಿಸುತ್ತಿರುವವರನ್ನು ಪತ್ತೆ ಮಾಡಲು ದಾಳಿ ನಡೆಯುತ್ತಿದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.