ಅಹಮದಾಬಾದ್: 2022ರ ಗುಜರಾತ್ ವಿಧಾನಸಭಾ ಚುನಾವಣೆಯು ಬಿಜೆಪಿಯ ಚುನಾವಣಾ ಪ್ರಯೋಗವಾಗಿದ್ದು, ಮುಂದಿನ 18 ತಿಂಗಳುಗಳಲ್ಲಿ ನಡೆಯಲಿರುವ ಒಂಬತ್ತು ರಾಜ್ಯಗಳ ವಿಧಾನಸಭಾ ಚುನಾವಣೆಗಳು ಮತ್ತು 2024ರ ಲೋಕಸಭಾ ಚುನಾವಣೆಯಲ್ಲೂ ಇದೇ ಯೋಜನೆಯನ್ನು ಬಿಜೆಪಿ ಪುನರಾವರ್ತಿಸಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.
2024 ಮತ್ತು ಅದರಾಚೆಗಿನ ಚುನಾವಣೆಗಳಿಗೆ ಪ್ರಧಾನಿ ನರೇಂದ್ರ ಮೋದಿಯ ಶಕ್ತಿ ಮತ್ತು ಅವರ ಮೇಲಿನ ನಂಬಿಕೆಯನ್ನು ಶಾಶ್ವತಗೊಳಿಸಲು ಗುರಿಯನ್ನು ಇದು ಹೊಂದಿದೆ ಎಂದು ಪಕ್ಷದ ಒಳಗಿನ ಮೂಲಗಳು ಹೇಳುತ್ತವೆ.
ಗುಜರಾತ್‌ನಲ್ಲಿ ಈ ಪ್ರಯೋಗ ಯಶಸ್ವಿಯಾದರೆ, ಕರ್ನಾಟಕ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢ ಸೇರಿದಂತೆ ದೇಶದಾದ್ಯಂತದ ಬಿಜೆಪಿಯ ಹಿರಿಯ ನಾಯಕರಿಗೆ ಇದು ಕೆಟ್ಟ ಸುದ್ದಿಯಾಗಲಿದೆ. ಅಷ್ಟೇ ಅಲ್ಲ, ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳನ್ನು ಇಕ್ಕಟ್ಟಿಗೆ ಸಿಲುಕಿಸಬಹುದು. ಏಕೆಂದರೆ, ಆ ಪಕ್ಷಗಳ ಹಾಲಿ ಶಾಸಕರನ್ನು ಸೆಳೆಯುವ ಗುರಿಯನ್ನು ಬಿಜೆಪಿ ಹೊಂದಿದೆ.
ಬಿಜೆಪಿಯ ಈ ಪ್ರಯೋಗವು ಕನಿಷ್ಠ ಮೂರು ಉದ್ದೇಶಗಳನ್ನು ಹೊಂದಿದೆ.
1. ನೈತಿಕ ಮತ್ತು ಹಣಕಾಸಿನ ಕುರಿತಾದ ಕಳಂಕಿತ ಶಾಸಕರನ್ನು ಬದಿಗೆ ಸರಿಸುವುದು. ತಮ್ಮ ವೈಯಕ್ತಿಕ ವರ್ಚಸ್ಸಿನಿಂದಲ್ಲದೆ, ಮೋದಿ ಜನಪ್ರಿಯತೆಯ ಹಿನ್ನೆಲೆಯಲ್ಲಿ ಚುನಾಯಿತರಾಗಲು ಬಯಸುವ ಅಭ್ಯರ್ಥಿಗಳು, ಯುವಕರು ಮತ್ತು ಮಧ್ಯಮ ವರ್ಗದವರಲ್ಲಿ ಪ್ರಧಾನ ಮಂತ್ರಿಯ ವರ್ಚಸ್ಸನ್ನು ಗಟ್ಟಿಗೊಳಿಸಲು ಶುದ್ಧ ಚಾರಿತ್ರ್ಯವನ್ನು ಹೊಂದಿರಬೇಕು.
ರಾಜಕೀಯ ತಜ್ಞರು ಹೇಳುವ ಪ್ರಕಾರ, 1970ರ ದಶಕದ ಮಧ್ಯಭಾಗದಲ್ಲಿ ಸಂಜಯ್ ಗಾಂಧಿ ಮತ್ತು ಅವರ ಆಪ್ತರು ಅಧಿಕಾರದ ದುರುಪಯೋಗದ ಮೂಲಕ ಇಂದಿರಾಗಾಂಧಿ ವರ್ಚಸ್ಸನ್ನು ಹಾಳುಮಾಡಿದ್ದರಿಂದ ಕಾಂಗ್ರೆಸ್‌ನ ಪತನ ಪ್ರಾರಂಭವಾಯಿತು. ಬಿಜೆಪಿ ಈಗ ತನ್ನ ಅಧಿಕಾರದ ಉತ್ತುಂಗದಲ್ಲಿದ್ದು, ಮೋದಿಯ ವರ್ಚಸ್ಸನ್ನು ಸಂರಕ್ಷಿಸಲು ಆಶಿಸುತ್ತಿದೆ.
2. ಎರಡನೆಯದಾಗಿ, ಆರೆಸ್ಸೆಸ್ ಅಥವಾ ಜನಸಂಘಕ್ಕೆ ಬದಲಾಗಿ ಪಕ್ಷ ಮತ್ತು ಮೋದಿಯವರ ನಾಯಕತ್ವಕ್ಕೆ ಬದ್ಧರಾಗಿರುವ ಯುವಜನರನ್ನು ಆಯ್ಕೆ ಮಾಡುವ ಉದ್ದೇಶ ಹೊಂದಲಾಗಿದೆ. ಉದಾಹರಣೆಗೆ, ಗುಜರಾತ್‌ನಲ್ಲಿ ಟಿಕೆಟ್ ನಿರಾಕರಿಸಲಾದ 40 ಹಾಲಿ ಶಾಸಕರ ಪೈಕಿ ಹಲವರು 75 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರು. ಅಲ್ಲದೆ, ಉತ್ತಮ ಚಾರಿತ್ರ್ಯದ ಜೊತೆ ಗೆಲ್ಲುವ ಅಭ್ಯರ್ಥಿಗಳಾಗಿದ್ದರು. 2017ರಲ್ಲಿ 53,000 ಮತಗಳ ಅಂತರದಿಂದ ಗೆದ್ದಿದ್ದ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರಿಗೆ ಕೇವಲ 66 ವರ್ಷ, ಆದರೆ, ಪಕ್ಷವು ಅವರ ರಾಜ್‌ಕೋಟ್ ಪಶ್ಚಿಮ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ನಿರಾಕರಿಸಿದ್ದರಿಂದ ಈಗ ಮನೆಯಲ್ಲಿ ಕೂರುವಂತಾಗಿದೆ.
ಪೀಳಿಗೆಯ ಬದಲಾವಣೆಯ ಅಗತ್ಯವಿರುವುದರಿಂದ ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಲಾಗಿದೆ ಎಂಬುದು ಬಿಜೆಪಿ ವಾದವಾಗಿದೆ ಆದರೆ, 76 ವರ್ಷ ವಯಸ್ಸಿನ ಮತ್ತು ಏಳು ಬಾರಿ ಶಾಸಕರಾಗಿರುವ ಯೋಗೇಶ್ ಪಟೇಲ್ ಅವರಿಗೆ ವಡೋದರದ ಮಂಜಲ್‌ಪುರ ಕ್ಷೇತ್ರದಿಂದ ಸ್ಪರ್ಧಿಸಲು ಏಕೆ ಅವಕಾಶ ನೀಡಲಾಗಿದೆ ಎಂಬ ಪ್ರಶ್ನೆ ಎದ್ದಿದೆ.
3. ಮೂರನೆಯದಾಗಿ ಪಕ್ಷ ಎಲ್ಲಿ ಗೆಲ್ಲುವುದಿಲ್ಲವೋ ಆ ಕ್ಷೇತ್ರಗಳಿಗೆ ಬೇರೆ ಪಕ್ಷಗಳಿಂದ ಸಮರ್ಥ ಶಾಸಕ ಮತ್ತು ಸಂಸದರನ್ನು ಕರೆತರುವ ಯೋಜನೆ ಬಿಜೆಪಿಗೆ ಇದೆ. ಉದಾಹರಣೆಗೆ ಚೋಟಾ ಉದೆಪುರ್ ಕ್ಷೇತ್ರದ ಕಾಂಗ್ರೆಸ್ ಶಾಸಕ, 10 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಮೋಹನ್ ಸಿನ್ಹ ರಥವಾ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳಲಾಗಿದೆ. 78 ವರ್ಷದ ಬುಡಕಟ್ಟು ಸಮುದಾಯದ ನಾಯಕ ಈ ತಿಂಗಳ ಆರಂಭದಲ್ಲಿ ಬಿಜೆಪಿ ಸೇರಿದ್ದರು. ಈ ಕ್ಷೇತ್ರದಿಂದ ಅವರ ಮಗ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.
2022 ರ ಗುಜರಾತ್ ಚುನಾವಣೆಯು ಮೋದಿಯವರ ರಾಜಕೀಯ ಪಥದಲ್ಲಿ ದಶಕದ ಮಹತ್ವವನ್ನು ಹೊಂದಿದೆ. 2002ರಲ್ಲಿ ನಿಗದಿತ ಅವಧಿಗೆ ಎಂಟು ತಿಂಗಳ ಮೊದಲು ನಡೆದ ಚುನಾವಣೆಯ ಗೆಲುವು ಗುಜರಾತ್ ಬಿಜೆಪಿಯಲ್ಲಿ ಮೋದಿಯವರ ಸ್ಥಾನವನ್ನು ಬಲಪಡಿಸಿತ್ತು. ಅದಾದ, ಒಂದು ದಶಕದ ನಂತರ, 2012ರ ಗೆಲುವು ಪ್ರಧಾನಿಮಂತ್ರಿ ಗಾದಿಯತ್ತ ದಾಪುಗಾಲಿಡಲು ಬೂಸ್ಟ್ ಮಾಡಿತ್ತು. 2022ರ ಗೆಲುವು ಬಿಜೆಪಿ ಮತ್ತು ಭಾರತದ ಪ್ರಜಾಪ್ರಭುತ್ವದ ಭವಿಷ್ಯದ ಪಾತ್ರವನ್ನು ರೂಪಿಸುತ್ತದೆ ಎಂದೇ ವಿಶ್ಲೇಷಿಸಲಾಗುತ್ತಿದೆ.