ಮುಳ್ಳೇರಿಯ: ಯಕ್ಷಗಾನ ಪ್ರಸಂಗಕರ್ತ, ಭಾಗವತ, ಯಕ್ಷಗುರು ವಿಶ್ವವಿನೋದ ಬನಾರಿಯವರ ಅಭಿನಂದನಾ ಸಮಾರಂಭ ಭಾನುವಾರ ಬನಾರಿ ಶ್ರೀಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ಕೀರಿಕ್ಕಾಡು ಮಾಸ್ತರ್ ಸ್ಮಾರಕ ಕಲಾಭವನದಲ್ಲಿ ನಡೆಯಿತು.
ಸಭಾ ಕಾರ್ಯಕ್ರಮದಲ್ಲಿ ಶ್ರೀಮದ್ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ದೀಪ ಪ್ರಜ್ವಲನೆಗೈದು ಮಾಸ್ತರ್ ವಿಷ್ಣು ಭಟ್ ಅವರ ಪುನರ್ ಮುದ್ರಿತ ಆತ್ಮಕಥೆ ಯಕ್ಷರಸ ಜೀವನ ಕೃತಿ ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು. ಕೀರಿಕ್ಕಾಡು ಮಾಸ್ತರ್ ವಿಷ್ಣುಭಟ್ಟರ ಸುಪುತ್ರ ವಿಶ್ವವಿನೋದ ಬನಾರಿಯವರು ಭಾಗವತರಾಗಿ ಕವಿಯಾಗಿ ಗುರುತಿಸಿಕೊಂಡವರು. ಸುಂದರವಾದ ಪರಿಸರದಲ್ಲಿ ಮನೋಹರ ಕಲಾಮಂದಿರವನ್ನು ಕಟ್ಟಿ ಇಲ್ಲಿ ನಿರಂತರವಾಗಿ ಯಕ್ಷಗಾನ ಕಾರ್ಯಕ್ರಮವನ್ನು ನಡೆಸುತ್ತಿರುವುದು ಅವರ ಯಕ್ಷಗಾನದ ಶಕ್ತಿ ಮತ್ತು ಪ್ರೀತಿಯನ್ನು ತೋರಿಸುತ್ತದೆ. ಈ ಸಂದರ್ಭದಲ್ಲಿ ಅವರಿಗೆ 75ರ ಅಭಿನಂದನೆಯನ್ನು ಸಲ್ಲಿಕೆಯಾಗಿದ್ದು, ಮುಂದೆಯೂ ಈ ಕ್ಷೇತ್ರಕ್ಕೆ ಅವರ ಸೇವೆ ಇರಲಿ ಎಂದು ಆಶಿಸುತ್ತೇನೆ. ಕಲೆಯ ಕಲರವ ಎಲ್ಲರಿಗೂ ಸಿಗಲಿ ಎಂದು ಸ್ವಾಮೀಜಿಯವರು ಶುಭಾಶೀರ್ವಾದವನ್ನಿತ್ತರು.
ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆ ಅಧ್ಯಕ್ಷತೆ ವಹಿಸಿ ಮಾತನಾಡಿ ಯಕ್ಷಗಾನದಲ್ಲಿ ಪ್ರತ್ಯುತ್ಪನ್ನಮತಿತ್ವ ಇದೆ. ಕಾವ್ಯ ಪುರಾಣ ಜ್ಞಾನ ಇರಬೇಕು. ವಿಭಿನ್ನ ಪರಿಸರದಿಂದ ವಿಭಿನ್ನ ವ್ಯಕ್ತಿತ್ವ ನಿರ್ಮಾಣಗೊಳ್ಳುತ್ತದೆ. ಜಾತಿ, ಮತ, ಪ್ರಾಯ ಹೀಗೆ ಯಾವುದೇ ಭೇದಭಾವ ಎಣಿಸದೆ ಯಕ್ಷಗಾನ ಕಲಿಸಿಕೊಡುವುದು ಕೀರಿಕ್ಕಾಡು ಮಾಸ್ತರ್ ಅವರ ಗುರುಕುಲದಲ್ಲಿ ಮಾತ್ರವೇ ಸಾಧ್ಯವಿತ್ತು. ಅದೇ ಗುರುಕುಲ ಮಾದರಿಯಲ್ಲಿ ವಿಶ್ವವಿನೋದ ಬನಾರಿಯವರು ಯಕ್ಷಗಾನ ಭಾಗವತಿಕೆಯನ್ನು ತಮ್ಮ ಶಿಷ್ಯಂದಿರಿಗೆ ಕಲಿಸುತ್ತಿದ್ದಾರೆ. ಮುಂದೆಯೂ ಅವರಿಂದ ಇನ್ನಷ್ಟು ಶಿಷ್ಯರು ಬೆಳಕಿಗೆ ಬರಲಿ ಎಂದು ಶುಭಹಾರೈಸಿದರು.
ಹಿರಿಯ ತಜ್ಞ ವೈದ್ಯ, ಕಲಾ ಪೋಷಕ ಡಾ. ಸುಧಾಕರ ಭಟ್ ಸುಳ್ಯ ಶುಭಹಾರೈಸಿದರು. ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ, ಹಿರಿಯ ವೈದ್ಯ, ಸಾಹಿತಿ ಡಾ. ರಮಾನಂದ ಬನಾರಿ ಅವರು ಸ್ವಾಗತಿಸಿದರು. ರಮಾನಂದ ರೈ ದೇಲಂಪಾಡಿ ವಂದಿಸಿದರು. ಅಪರ್ಣಾ ರಾವ್ ಕುತ್ಯಾಡಿ, ಜಲಜಾಕ್ಷಿ ರೈ ಬೆಳ್ಳಿಪ್ಪಾಡಿ ಮತ್ತು ವಿಕೇಶ್ ರೈ ಶೇಣಿ ಕಾರ್ಯಕ್ರಮವನ್ನು ನಿರೂಪಿಸಿದರು.
ಕಾರ್ಯಕ್ರಮದ ಅಂಗವಾಗಿ ಸಭಾ ಕಾರ್ಯಕ್ರಮದ ಮೊದಲು ಗಣಪತಿ ಹವನ ಮತ್ತು ಶ್ರೀ ಗೋಪಾಲಕೃಷ್ಣ ದೇವರ ಪೂಜಾರ್ಚನೆಯೊಂದಿಗೆ ಆರಂಭಗೊಂಡ ಈ ಗಾನಾರ್ಚನೆಯಲ್ಲಿ ಸಾಯಿ ನಕ್ಷತ್ರ, ಪಾವನಾ ನೀರ್ಪಾಜೆ, ಅಭಿಜ್ಞಾ ಭಟ್ ನಾಟಿಕೇರಿ, ನಿತೀಶ್ ಕುಮಾರ್ ಎಂಕಣ್ಣಮೂಲೆ, ಶಶಿಧರ ತೆಕ್ಕೇಕರೆ, ನಾರಾಯಣ ತೋರಣಗಂಡಿ, ಚಂದ್ರಶೇಖರ ಉಬರಡ್ಕ, ಮನೋಹರ ಕಾಮತ್ ಕಾವು, ಮೋಹನ ಮೆಣಸಿನಕಾನ, ದಯಾನಂದ ಬಂದ್ಯಡ್ಕ, ವಿದ್ಯಾಭೂಷಣ ಪಂಜಾಜೆ, ದಯಾನಂದ ಪಾಟಾಳಿ ಮಯ್ಯಾಳ ಅವರು ಭಾಗವತರಾಗಿ ತಮ್ಮ ಕಲಾ ಪ್ರತಿಭೆಯನ್ನು ತೋರ್ಪಡಿಸಿದರು. ಚೆಂಡೆ ಮದ್ದಳೆ ವಾದನದಲ್ಲಿ ಕುಮಾರ ಸುಬ್ರಹ್ಮಣ್ಯ ವಳಕುಂಜ, ವಿಷ್ಣುಶರಣ ಬನಾರಿ, ಅವರು ಸಹಕರಿಸಿದರು.