ಕುಂಬಳೆ: ಜಲಜೀವನ ಮಿಷನ್ ಯೋಜನೆಯ ಭಾಗವಾಗಿ ಕುಂಬಳೆ ಗ್ರಾಮ ಪಂಚಾಯತಿ ಪೂಕಟ್ಟೆಯಲ್ಲಿ ಜಲ ಪ್ರಾಧಿಕಾರವು ನೀರು ಶುದ್ಧೀಕರಣ ಘಟಕವನ್ನು ನಿರ್ಮಿಸಲಿದೆ. ಕುಡಿಯುವ ನೀರಿನ ಕೊರತೆ ಎದುರಿಸುತ್ತಿರುವ ಕುಂಬಳೆ ಮತ್ತು ಮಂಗಲ್ಪಾಡಿ ಗ್ರಾಮ ಪಂಚಾಯಿತಿಗಳಿಗೆ ಈ ಯೋಜನೆಯಿಂದ ಲಾಭವಾಗಲಿದೆ. ಶಿರಿಯಾ ನದಿಯಿಂದ ತೆಗೆದ ನೀರನ್ನು ವೈಜ್ಞಾನಿಕವಾಗಿ ಶುದ್ಧೀಕರಿಸಿ ಕುಟುಂಬಗಳಿಗೆ ವಿತರಿಸಲಾಗುವುದು. ಕುಂಬಳೆ ಪಂಚಾಯತಿ ಈಗಾಗಲೇ ಯೋಜನೆಗೆ ಭೂಮಿಯನ್ನು ಗುರುತಿಸಿತ್ತು. ಈ ಜಾಗ ಸ್ಥಳೀಯ ದೇಗುಲಕ್ಕೆ ಹೊಂದಿಕೊಂಡಂತೆ ಇರುವುದರಿಂದ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿತ್ತು. ಮೊದಲ ಹಂತದಲ್ಲಿ ಜಾಗ ಅಳೆದು ಗಡಿ ಗುರುತಿಸಲು ಬಂದ ಅಧಿಕಾರಿಗಳನ್ನು ಸ್ಥಳೀಯರು ತಡೆದರು. ಇದರಿಂದ ಯೋಜನೆ ನೆಲಕ್ಕಚ್ಚುವ ಸಾಧ್ಯತೆ ಎದುರಾಗಿತ್ತು.
ಪ್ರಸ್ತುತ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಚಂದ್ ಮಧ್ಯ ಪ್ರವೇಶಿಸಿದ್ದು ಯೋಜನಾ ಪ್ರದೇಶಕ್ಕೆ ಜಿಲ್ಲಾಧಿಕಾರಿ ಶನಿವಾರ ಖುದ್ದು ಭೇಟಿ ನೀಡಿದರು.
ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಅಧಿಕಾರಿಗಳು ಸರ್ವೆ ನಡೆಸಿ ಗಡಿ ಗುರುತಿಸಲಾಗಿದೆ. ಯೋಜನೆಗೆ ಭೂಮಿ ಮಂಜೂರು ಮಾಡಲು ವಿರೋಧ ವ್ಯಕ್ತವಾದ ಕಾರಣ ಸ್ಥಳೀಯ ನಿವಾಸಿಗಳು ಪರ್ಯಾಯ ಜಮೀನು ಹುಡುಕುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಪ್ರಸ್ತುತ, ಸ್ಥಳೀಯ ನಿವಾಸಿಗಳು ಕಂಡುಕೊಂಡ ಜಮೀನು ಈ ಯೋಜನೆ ಪ್ರಾರಂಭಿಸಲು ಯೋಜಿಸಿರುವ ಪ್ರದೇಶದ ಸಮೀಪದಲ್ಲಿದೆ. ಸದರಿ ಜಮೀನಿನಲ್ಲಿ ಯೋಜನೆ ಆರಂಭಿಸುವಾಗ ಯಾವುದೇ ಅಭ್ಯಂತರವಿಲ್ಲ ಎಂಬ ಸ್ಥಳೀಯರ ಭರವಸೆಯನ್ನು ತಿಳಿಸಲು ಜಿಲ್ಲಾಧಿಕಾರಿ ಮೂರು ದಿನಗಳ ಕಾಲಾವಕಾಶ ನೀಡಿದ್ದಾರೆ.
2024ರ ವೇಳೆಗೆ ಪೂರ್ಣಗೊಳ್ಳುವ ಜಲಜೀವನ ಮಿಷನ್ ಯೋಜನೆ ಮೂಲಕ ಎಲ್ಲ ಗ್ರಾಮಗಳಿಗೆ ಕುಡಿಯುವ ನೀರು ತಲಪಿಸುವ ಗುರಿ ಹೊಂದಲಾಗಿದೆ. ಭೂಮಿ ಲಭ್ಯತೆ ಸಮಸ್ಯೆಯಿಂದ ಯೋಜನೆ ವಿಳಂಬ ಮಾಡದಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಕುಡಿಯುವ ನೀರಿನ ಕೊರತೆಗೆ ಪರಿಹಾರ: ಕುಂಬಳೆಗೆ ಬರಲಿದೆ ನೀರು ಶುದ್ಧೀಕರಣ ಘಟಕ: ಉದ್ದೇಶಿತ ಯೋಜನಾ ಪ್ರದೇಶಕ್ಕೆ ಜಿಲ್ಲಾಧಿಕಾರಿ ಭೇಟಿ
0
ನವೆಂಬರ್ 05, 2022