ಅಹಮದಾಬಾದ್: 135 ಜನರನ್ನು ಬಲಿತೆಗೆದುಕೊಂಡ ಮೊರ್ಬಿ ತೂಗುಸೇತುವೆ ಕುಸಿದ ದುರಂತದ ಬಗ್ಗೆ ಎದುರಾಗಿರುವ ಪ್ರಶ್ನೆಗಳಿಗೆ ನಿರ್ಣಾಯಕ ಉತ್ತರ ಹುಡುಕುತ್ತಿರುವ ರಾಜ್ಯ ಸರ್ಕಾರಕ್ಕೆ ಮಂಗಳವಾರ ಗುಜರಾತ್ ಹೈಕೋರ್ಟ್ ಚಾಟಿ ಬೀಸಿದೆ.
ಸೇತುವೆ ನಿರ್ವಹಣೆಯ ಗುತ್ತಿಗೆ ಅವಧಿ ಮೂರು ವರ್ಷಗಳ ಹಿಂದೆಯೇ ಪೂರ್ಣಗೊಂಡರೂ ಟೆಂಡರ್ ಕರೆಯದೆ, ಮತ್ತೆ ಒರೆವಾ ಸಮೂಹದ (ಗಡಿಯಾರ ತಯಾರಿಕೆಯ ಅಜಂತಾ ಕಂಪನಿ) ಕಂಪನಿಗೆ ಸೇತುವೆ ನಿರ್ವಹಣೆಯ ಜವಾಬ್ದಾರಿ ಏಕೆ ನೀಡಲಾಯಿತು?
ಸರ್ಕಾರವು ಯಾಕಾಗಿ ಇಷ್ಟು ವರ್ಷ ಒಬ್ಬನೇ ವ್ಯಕ್ತಿಗೆ ಸೇತುವೆ ನಿರ್ವಹಣೆ ಹೆಸರಿನ 'ಇನಾಮು' ನೀಡಿತು ಎಂದು ಕಟುವಾಗಿ ಪ್ರಶ್ನಿಸಿದೆ.
ಮೊರ್ಬಿ ತೂಗು ಸೇತುವೆ ದುರಂತದ ಕುರಿತು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು, ವಿಚಾರಣೆ ಆರಂಭಿಸಿರುವ ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಅಶುತೋಷ್ ಜೆ. ಶಾಸ್ತ್ರಿ ಅವರಿದ್ದ ಪೀಠವು, ಒರೆವಾಗೆ ನೀಡಲಾದ ಗುತ್ತಿಗೆ ಒಪ್ಪಂದಕ್ಕೆ ಸಂಬಂಧಿಸಿದ ಎಲ್ಲಾ ಕಡತಗಳನ್ನು ನವೆಂಬರ್ 18ರೊಳಗೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತು. ಎರಡು ವಾರಗಳ ಬಳಿಕ ಮುಂದಿನ ವಿಚಾರಣೆ ನಡೆಸುವುದಾಗಿ ಪೀಠ ಹೇಳಿತು.
ಮೊರ್ಬಿ ಪುರಸಭೆ ಮತ್ತು ಗುತ್ತಿಗೆ ಪಡೆದ ಒರೆವಾ ಸಂಸ್ಥೆ ನಡುವೆ ಮಾಡಿಕೊಂಡಿರುವ ಕರಾರು ಪತ್ರವನ್ನು ಗಮನಿಸಿದ ವಿಭಾಗೀಯ ಪೀಠವು, 'ನಿಮ್ಮ ಒಪ್ಪಂದದ ಪತ್ರ ಒಂದೂಕಾಲು ಪುಟ ಇದೆ. ಒಪ್ಪಂದದಲ್ಲಿ ಒಂದೇ ಒಂದು ಷರತ್ತನ್ನೂ ವಿಧಿಸಿಲ್ಲ. ಟೆಂಡರ್ ಪ್ರಕ್ರಿಯೆ ಪಾಲಿಸಿಲ್ಲ. ಆಸಕ್ತಿ ವ್ಯಕ್ತಪಡಿಸುವ ಪತ್ರವನ್ನೂ ಕೇಳಿಲ್ಲ. ಇಬ್ಬರ ನಡುವೆ 'ಇನಾಮು' ನೀಡುವ, ಪಡೆಯುವ ಹೊಂದಾಣಿಕೆ ನಡೆದಿತ್ತೇ' ಎಂದು ಖಾರವಾಗಿ ಪ್ರಶ್ನಿಸಿತು.
ದುರಂತಕ್ಕೆ ಕಾರಣವಾದ ಪುರಸಭೆಯನ್ನು ಸೂಪರ್ ಸೀಡ್ ಮಾಡಲು 1963ರ ಗುಜರಾತ್ ಪುರಸಭೆಗಳ ಕಾಯ್ದೆಯ ಸೆಕ್ಷನ್ 263ರ ಅಡಿಯಲ್ಲಿ ಏಕೆ ಅಧಿಕಾರ ಚಲಾಯಿಸಲಿಲ್ಲ ಎಂಬುದರ ಬಗ್ಗೆ ಪ್ರತಿಕ್ರಿಯಿಸುವಂತೆ ಪೀಠವು ಸರ್ಕಾರಕ್ಕೆ ಸೂಚಿಸಿತು.
ಪುರಸಭೆ ವಿರುದ್ಧ ಕೋರ್ಟ್ ಆಕ್ರೋಶ: ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿದ್ದರೂ ಮೊರ್ಬಿ ಪುರಸಭೆ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರಾಗಲಿಲ್ಲ. ಇದನ್ನು ಗಮನಿಸಿದ ನ್ಯಾಯಮೂರ್ತಿ ಕುಮಾರ್, 'ಹಾಗಾದರೆ ಅವರು ಈಗ ಜಾಣ ನಟನೆ ಮಾಡುತ್ತಿದ್ದಾರೆ' ಎಂದರು.
'ವಿಚಾರಣೆಗೆ ಹಾಜರಾಗುವಂತೆ ಪುರಸಭೆಗೆ ನೋಟಿಸ್ ನೀಡಿ' ಎಂದು ಜಿಲ್ಲಾ ನ್ಯಾಯಾಧೀಶರಿಗೆ, ನ್ಯಾಯಮೂರ್ತಿ ಕುಮಾರ್ ಅವರು ಆದೇಶಿಸಿದರು.
'ಪುರಸಭೆಯ ಅಧಿಕಾರಿಗಳು ಪ್ರಕರಣದ ಬಗ್ಗೆ ಏನು ಹೇಳುತ್ತಾರೆ ಎಂದು ಕೇಳುವುದಕ್ಕಾಗಿಯೇ ಬುಧವಾರ ವಿಚಾರಣೆ ನಡೆಸಲಾಗುವುದು. ಈ ವೇಳೆ ಎಲ್ಲರೂ ಹಾಜರಿರಲೇಬೇಕು' ಎಂದೂ ಅವರು ಕಟ್ಟಪ್ಪಣೆ ವಿಧಿಸಿದರು.
ಪೀಠವು ಸರ್ಕಾರದ ಮುಂದಿಟ್ಟ ಪ್ರಶ್ನೆಗಳು
* 2017ರ ಜೂನ್ 15ರಂದು ಗುತ್ತಿಗೆ ಒಪ್ಪಂದದ ಅವಧಿ ಪೂರ್ಣಗೊಂಡಿತ್ತು. ಇದಾದ ಬಳಿಕ, ಯಾವ ಕ್ರಮ ಕೈಗೊಂಡಿದ್ದೀರಿ?
* ಪುರಸಭೆ ಮುಖ್ಯಾಧಿಕಾರಿ ವಿರುದ್ಧ ಶಿಸ್ತುಕ್ರಮವನ್ನು ಯಾಕಾಗಿ ಇನ್ನೂ ಕೈಗೊಂಡಿಲ್ಲ?
*
ಒಪ್ಪಂದದ ಅವಧಿ ಮುಗಿದರೂ ಗುತ್ತಿಗೆದಾರ ಹೇಗೆ ಸೇತುವೆ ನಿರ್ವಹಿಸುತ್ತಿದ್ದರು? ಒಪ್ಪಂದ
ಜಾರಿ ಮಾಡದಿದ್ದರೆ ದುರಸ್ತಿ ಕೆಲಸ ಮಾಡುವುದಿಲ್ಲ ಎಂದು ಫೆಬ್ರುವರಿ 2020ರ ಬಳಿಕ
ಗುತ್ತಿಗೆದಾರ ಜಿಲ್ಲಾಧಿಕಾರಿಗೆ ಹಲವು ಬಾರಿ ಹೇಳಿದ್ದರು. ಆದರೂ ಪ್ರವಾಸಿಗರಿಂದ ಬರುವ
ಹಣವನ್ನು ಗುತ್ತಿಗೆದಾರನೇ ಪಡೆದುಕೊಳ್ಳುತ್ತಿದ್ದ. ಇದಕ್ಕೆ ಯಾರು ಅವಕಾಶ ಕೊಟ್ಟಿದ್ದು?
* ದುಡಿಯುವ ಆಧಾರಸ್ತಂಭ ಕಳೆದುಕೊಂಡ ಸಂತ್ರಸ್ತ ಕುಟುಂಬದ ಸದಸ್ಯರಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡುವ ಬಗ್ಗೆ ಸರ್ಕಾರದ ನಿರ್ಧಾರ ಏನು?