ನವದೆಹಲಿ: ತನ್ನ ಸಹಜೀವನ ಸಂಗಾತಿ ಶ್ರದ್ಧಾ ವಾಲಕರ್ ಹತ್ಯೆಗೆ ಸಂಬಂಧಿಸಿದಂತೆ ವಿಧಿವಿಜ್ಞಾನ ಪರೀಕ್ಷೆಗೆ ಒಳಗಾಗಿರುವ ಅಫ್ತಾಬ್ ಪೂನಾವಾಲಾ, ತಪ್ಪೊಪ್ಪಿಕೊಂಡಿದ್ದಾನೆ ಎಂದು ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ.
ವಿಧಿ ವಿಜ್ಞಾನ ಪರೀಕ್ಷೆ ವೇಳೆ ಅಫ್ತಾಬ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.
ಆದರೆ ಅವನಿಗೆ ಹತ್ಯೆ ಬಗ್ಗೆ ಯಾವುದೇ ಪಶ್ಚಾತ್ತಾಪವಿಲ್ಲ. ಆದಾಗ್ಯೂ ಈ ಪರೀಕ್ಷೆ ಅಥವಾ ಮಂಪರು ಪರೀಕ್ಷೆಯಲ್ಲಿನ ಇಂತಹ ತಪ್ಪೊಪ್ಪಿಗೆ, ವಾಡಿಕೆಯಂತೆ ಪ್ರಾಥಮಿಕ ಸಾಕ್ಷ್ಯವಾಗಿ ಪರಿಗಣನೆಯಾಗುವುದಿಲ್ಲ. ಇದನ್ನು ಸಾಕ್ಷ್ಯಕ್ಕೆ ಪೂರಕವಾಗಿ ಬಳಸಬಹುದು ಎಂದು ಮೂಲಗಳು ಹೇಳಿವೆ.
ಮಂಪರು ಪರೀಕ್ಷೆ ಮುಂದಿನ ಹಂತ. ಅದಾದ ಬಳಿಕ ಡಿ.1ರಂದು ಸುಳ್ಳು ಪತ್ತೆ ಪರೀಕ್ಷೆ ನಡೆಯಲಿದೆ. ದೆಹಲಿಯ ಸ್ಥಳೀಯ ನ್ಯಾಯಾಲಯವು ಡಿ.1-5ರವರೆಗೆ ಈ ಪರೀಕ್ಷೆ ನಡೆಸಲು ಅನುಮತಿ ನೀಡಿದೆ.
ಮೇ ತಿಂಗಳಿನಲ್ಲಿ ಶ್ರದ್ಧಾ ಹತ್ಯೆ ನಡೆದಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ತನಿಖೆಯ ವೇಳೆ ಪತ್ತೆಯಾದ ಶ್ರದ್ಧಾ ದೇಹದ ಭಾಗಗಳನ್ನು ಡಿಎನ್‌ಎ ಪರೀಕ್ಷೆಗೆ ಕಳುಹಿಸಲಾಗಿದೆ. ಅದರ ವರದಿ ಬಳಿಕವೇ ಅದು ಶ್ರದ್ಧಾ ದೇಹವೆಂಬುದು ಖಾತ್ರಿಯಾಗಲಿದೆ. ಹೀಗಾಗಿ ಇತರೆ ಖಚಿತ ಸಾಕ್ಷ್ಯ ಲಭಿಸಿದ ಬಳಿಕವಷ್ಟೆ ಈ ಪರೀಕ್ಷೆಗಳ ವರದಿ ಪೊಲೀಸರಿಗೆ ಸಹಾಯಕವಾಗಲಿದೆ.
ತನ್ನ ಪ್ರೇಯಸಿ ಶ್ರದ್ಧಾ ಹತ್ಯೆಗೈದಿದ್ದ ಆರೋಪಿ ಅಫ್ತಾಬ್, ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ವಿವಿಧೆಡೆ ಎಸೆದಿದ್ದ ಎಂದು ಪ್ರಾಥಮಿಕ ತನಿಖೆ ಬಳಿಕ ಪೊಲೀಸರು ಹೇಳಿದ್ದರು.