ತಿರುವನಂತಪುರ: ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಅವರು ತಮಗೆ ನೀಡಿರುವ ಶೋಕಾಸ್ ನೋಟಿಸ್ ಗಳ ವಿರುದ್ಧ ಏಳು ಉಪಕುಲಪತಿಗಳು ಬುಧವಾರ ಕೇರಳ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ANI ವರದಿ ಮಾಡಿದೆ.
ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲೇಖಿಸಿ ಖಾನ್ ಅವರು ಒಂಬತ್ತು ಸರಕಾರಿ ವಿಶ್ವವಿದ್ಯಾಲಯಗಳ ಉಪಕುಲಪತಿಗಳಿಗೆ ರಾಜೀನಾಮೆ ಸಲ್ಲಿಸುವಂತೆ ಅಕ್ಟೋಬರ್ 23 ರಂದು ಸೂಚಿಸಿದ್ದರು.
ಆದರೆ, ಮರುದಿನವೇ ಈ ಆದೇಶಕ್ಕೆ ತಡೆ ನೀಡಿರುವ ಹೈಕೋರ್ಟ್, ವಿವಿಗಳ ಪದನಿಮಿತ್ತ ಕುಲಪತಿಯಾಗಿರುವ ರಾಜ್ಯಪಾಲರು ಶೋಕಾಸ್ ನೋಟಿಸ್‌ಗಳ ಆಧಾರದ ಮೇಲೆ ಆದೇಶ ಹೊರಡಿಸುವವರೆಗೆ ಉಪಕುಲಪತಿಗಳು ತಮ್ಮ ಹುದ್ದೆಗಳಲ್ಲಿ ಮುಂದುವರಿಯಬಹುದು ಎಂದು ಹೇಳಿತ್ತು.
ಅಕ್ಟೋಬರ್ 24 ರಂದು ಖಾನ್ ಅವರು ಕೇರಳ ವಿಶ್ವವಿದ್ಯಾಲಯ, ಮಹಾತ್ಮಾ ಗಾಂಧಿ ವಿಶ್ವವಿದ್ಯಾಲಯ, ಕೊಚ್ಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ, ಕೇರಳದ ಮೀನುಗಾರಿಕೆ ಮತ್ತು ಸಾಗರ ಅಧ್ಯಯನ ವಿಶ್ವವಿದ್ಯಾಲಯ, ಕಣ್ಣೂರು ವಿಶ್ವವಿದ್ಯಾಲಯ, ಎಪಿಜೆ ಅಬ್ದುಲ್ ಕಲಾಂ ತಂತ್ರಜ್ಞಾನ ವಿಶ್ವವಿದ್ಯಾಲಯ, ಶ್ರೀ ಶಂಕರಾಚಾರ್ಯ ಸಂಸ್ಕೃತ ವಿಶ್ವವಿದ್ಯಾಲಯ, ಕ್ಯಾಲಿಕಟ್ ವಿಶ್ವವಿದ್ಯಾನಿಲಯ ಹಾಗೂ ತುಂಚತ್ ಎಝುತಾಚನ್ ಮಲಯಾಳಂ ವಿಶ್ವವಿದ್ಯಾಲಯದ ಉಪಕುಲಪತಿಗಳಿಗೆ ನೋಟಿಸ್ ಜಾರಿಗೊಳಿಸಿದರು.
ಇದು ಕಾನೂನುಬಾಹಿರ ಎಂದು ಹೇಳುವ ಮೂಲಕ ನೋಟಿಸ್‌ಗಳನ್ನು ರದ್ದುಗೊಳಿಸುವಂತೆ ಬುಧವಾರ ತಮ್ಮ ಮನವಿಯಲ್ಲಿ ಉಪಕುಲಪತಿಗಳು ಕೋರಿದರು ಎಂದು The Indian Express ವರದಿ ಮಾಡಿದೆ. ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಇಂದು ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲಿದ್ದಾರೆ.