ಲಂಡನ್: ಶಸ್ತ್ರಾಸ್ತ್ರ ವ್ಯಾಪಾರಿ ಸಂಜಯ್ ಭಂಡಾರಿ ಹಸ್ತಾಂತರದಲ್ಲಿ ಭಾರತ ಗೆದ್ದಿದ್ದು ಪರಾರಿಯಾಗಿರುವ ಶಸ್ತ್ರಾಸ್ತ್ರ ವ್ಯಾಪಾರಿ ಸಂಜಯ್ ಭಂಡಾರಿ ಅವರನ್ನು ಹಸ್ತಾಂತರಿಸಲು ಯುಕೆ ನ್ಯಾಯಾಲಯ ಅನುಮತಿ ನೀಡಿದೆ.
ಭಂಡಾರಿ ವಿರುದ್ಧ ತೆರಿಗೆ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪವಿದೆ. ಅಲ್ಲದೆ, ಕೆಲವು ರಕ್ಷಣಾ ವ್ಯವಹಾರಗಳಲ್ಲಿ ಲಂಚ ಪಡೆದ ಆರೋಪವಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದ ಶಸ್ತ್ರಾಸ್ತ್ರ ವ್ಯವಹಾರಗಳಿಗೆ ಸಂಬಂಧಿಸಿದಂತೆ ವಿದೇಶಿ ಕಂಪನಿಗಳಿಂದ 400 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಕಿಕ್ ಬ್ಯಾಕ್ ಅನ್ನು ಸಂಜಯ್ ಪಡೆದಿದ್ದಾರೆ ಎನ್ನಲಾಗಿದೆ. ದುಬೈನ ಹಲವಾರು ಸಂಸ್ಥೆಗಳಲ್ಲಿ ಮಾಡಿದ ವಹಿವಾಟಿನ ದಾಖಲೆಗಳಿಂದ ಇದು ಸ್ಪಷ್ಟವಾಗಿದೆ.
ಈ ವರ್ಷದ ಆರಂಭದಲ್ಲಿ ಲಂಡನ್‌ನ ವೆಸ್ಟ್‌ಮಿನ್‌ಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಪ್ರಕರಣವನ್ನು ಆಲಿಸಿದ ಜಿಲ್ಲಾ ನ್ಯಾಯಾಧೀಶ ಮೈಕೆಲ್ ಸ್ನೋ, ಅವರನ್ನು ಹಸ್ತಾಂತರಿಸುವುದಕ್ಕೆ ಯಾವುದೇ ನಿರ್ಬಂಧಗಳಿಲ್ಲ ಎಂದು ತೀರ್ಮಾನಿಸಿದರು. ಅಲ್ಲದೆ ಹಸ್ತಾಂತರಕ್ಕೆ ಆದೇಶಿಸಲು ಅಧಿಕಾರ ಹೊಂದಿರುವ ಯುಕೆ ಗೃಹ ಕಾರ್ಯದರ್ಶಿ ಸುಯೆಲ್ಲಾ ಬ್ರಾವರ್‌ಮನ್ ಅವರಿಗೆ ಪ್ರಕರಣವನ್ನು ಕಳುಹಿಸಲು ನಿರ್ಧರಿಸಿದರು. ಹಸ್ತಾಂತರವು ಪ್ರತಿವಾದಿಯ ಕನ್ವೆನ್ಷನ್ ಹಕ್ಕುಗಳೊಂದಿಗೆ ಹೊಂದಿಕೆಯಾಗುತ್ತದೆ ಎಂದು ನಾನು ತೃಪ್ತಿ ಹೊಂದಿದ್ದೇನೆ, ಪ್ರತಿವಾದಿಯನ್ನು ಹಸ್ತಾಂತರಿಸಬೇಕೆ ಎಂಬ ನಿರ್ಧಾರಕ್ಕಾಗಿ ನಾನು ಈ ಪ್ರಕರಣವನ್ನು ರಾಜ್ಯ ಕಾರ್ಯದರ್ಶಿಗೆ ಕಳುಹಿಸಬೇಕು ಎಂದು ನ್ಯಾಯಾಧೀಶ ಸ್ನೋ ಅವರು ತಮ್ಮ ತೀರ್ಪಿನಲ್ಲಿ ಹೇಳಿದ್ದರು.
ನ್ಯಾಯಾಧೀಶರು ಹೇಳಿದ್ದೇನು?
ಸರ್ಕಾರ ನೀಡಿದ ಭರವಸೆಯ ಆಧಾರದ ಮೇಲೆ ಮಾತ್ರ ಇಂತಹ ಆದೇಶ ಹೊರಡಿಸುತ್ತಿದ್ದೇನೆ ಎಂದು
ನ್ಯಾಯಾಧೀಶರು ಹೇಳಿದರು. ಸಂಬಂಧಿತ ಆರೋಗ್ಯ ನಿಬಂಧನೆಗಳೊಂದಿಗೆ ನವದೆಹಲಿಯಲ್ಲಿರುವ
ತಿಹಾರ್ ಜೈಲಿನಲ್ಲಿ ಭಂಡಾರಿ ಅವರನ್ನು ಪ್ರತ್ಯೇಕ ಸೆಲ್‌ನಲ್ಲಿ ಇರಿಸಲಾಗುವುದು ಎಂದು
ಭಾರತ ಸರ್ಕಾರ ನೀಡಿದ ಭರವಸೆಯನ್ನು ಉಲ್ಲೇಖಿಸಿ ಅವರು ಹೇಳಿದರು. ಭಂಡಾರಿಗಾಗಿ ಭಾರತ
ಸರ್ಕಾರದ ಹಸ್ತಾಂತರ ಕೋರಿಕೆಯನ್ನು ಆಗಿನ ಯುಕೆ ಗೃಹ ಸಚಿವೆ ಪ್ರೀತಿ ಪಟೇಲ್ ಅವರು ಜೂನ್
2020ರಲ್ಲಿ ಪ್ರಮಾಣೀಕರಿಸಿದರು. ಅದೇ ವರ್ಷ ಮುಂದಿನ ತಿಂಗಳು ಹಸ್ತಾಂತರ ವಾರಂಟ್ ಮೇಲೆ
ಅವರನ್ನು ಬಂಧಿಸಲಾಯಿತು.
ಭಾರತ ಸರ್ಕಾರವು ಹಸ್ತಾಂತರಕ್ಕೆ ಒತ್ತಾಯಿಸಿತ್ತು
ಅಕ್ರಮ ಹಣ ವರ್ಗಾವಣೆ ಮತ್ತು ಕಪ್ಪುಹಣ(ಬಹಿರಂಗಪಡಿಸದ ವಿದೇಶಿ ಆದಾಯ ಮತ್ತು ಆಸ್ತಿ)
ಮತ್ತು ತೆರಿಗೆ ಕಾಯ್ದೆ 2015ರ ಅಡಿಯಲ್ಲಿ ಅವರ ವಿದೇಶಿ ಆಸ್ತಿಯನ್ನು ಘೋಷಿಸಲು ವಿಫಲವಾದ
ಆಧಾರದ ಮೇಲೆ ಶಸ್ತ್ರಾಸ್ತ್ರ ವ್ಯಾಪಾರಿ ಸಂಜಯ್ ಭಂಡಾರಿ ಅವರನ್ನು ಹಸ್ತಾಂತರಿಸಲು ಭಾರತ
ಸರ್ಕಾರ ಪ್ರಯತ್ನಿಸುತ್ತಿತ್ತು. ಅಕ್ಟೋಬರ್ 4ರಂದು ಲಂಡನ್‌ನ ವೆಸ್ಟ್‌ಮಿನಿಸ್ಟರ್
ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಹಸ್ತಾಂತರ ಪ್ರಕರಣದ ಕೊನೆಯ ವಾದಗಳನ್ನು ಆಲಿಸಲಾಯಿತು
ಮತ್ತು ಈಗ ತೀರ್ಪು ನೀಡಲಾಗಿದೆ. ಸಂಜಯ್ ಭಂಡಾರಿ ಅವರು ವಿದೇಶಿ ಆಸ್ತಿಗಳನ್ನು
ಮರೆಮಾಚಿದ್ದಾರೆ. ಹಳೆಯ ದಾಖಲೆಗಳನ್ನು ಬಳಸಿದ್ದಾರೆ. ಭಾರತೀಯ ತೆರಿಗೆ ಅಧಿಕಾರಿಗಳಿಗೆ
ಘೋಷಿಸದ ಆಸ್ತಿಯಿಂದ ಲಾಭ ಗಳಿಸಿದ್ದಾರೆ ಮತ್ತು ವಿದೇಶಿ ಆಸ್ತಿಗಳ ಬಗ್ಗೆ ಅಧಿಕಾರಿಗಳಿಗೆ
ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ, ಆರೋಪಗಳನ್ನು ಅವರು
ನಿರಾಕರಿಸುತ್ತಲೇ ಬಂದಿದ್ದರು.
ಇಡಿ ದಾಳಿಯ ನಂತರ ದೇಶದಿಂದ ಪಲಾಯನ
2016ರ ಅಕ್ಟೋಬರ್‌ನಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಅವರ ನಿವಾಸದ ಮೇಲೆ ದಾಳಿ ನಡೆಸಿದ
ನಂತರ ಭಂಡಾರಿ ಭಾರತದಿಂದ ಪರಾರಿಯಾಗಿದ್ದರು ಎಂದು ವರದಿಯಾಗಿದೆ. ಆತನ ವಿರುದ್ಧ ಲುಕ್
ಔಟ್ ನೋಟಿಸ್ ಕೂಡ ಜಾರಿ ಮಾಡಲಾಗಿತ್ತು. ದಾಳಿ ವೇಳೆ ರಕ್ಷಣಾ ಸಚಿವಾಲಯದ ಗೌಪ್ಯ
ದಾಖಲೆಗಳು ಪತ್ತೆಯಾಗಿವೆ. 2020ರಲ್ಲಿ ಜುಲೈ 15ರಂದು ಲಂಡನ್‌ನಲ್ಲಿ ಸಂಜಯ್
ಭಂಡಾರಿಯನ್ನು ಬಂಧಿಸಿದ ನಂತರ, ಅವರನ್ನು ವೆಸ್ಟ್‌ಮಿನಿಸ್ಟರ್ ಮ್ಯಾಜಿಸ್ಟ್ರೇಟ್
ನ್ಯಾಯಾಲಯವು ಹಲವಾರು ಕಠಿಣ ಷರತ್ತುಗಳೊಂದಿಗೆ ಜಾಮೀನಿನ ಮೇಲೆ ಬಿಡುಗಡೆ ಮಾಡಿತು.