ತ್ರಿಶ್ಶೂರ್: ಮಧ್ಯ ಕೇರಳದ ತ್ರಿಶ್ಶೂರ್ ಜಿಲ್ಲೆಯ ಇಸ್ಲಾಮಿಕ್ ಶಿಕ್ಷಣ ಸಂಸ್ಥೆಯೊಂದು ವಿದ್ಯಾರ್ಥಿಗಳಿಗೆ ಸಂಸ್ಕೃತ ಬೋಧಿಸುವ ಮೂಲಕ ಗಮನ ಸೆಳೆದಿದೆ.
ಮಲಿಕ್ ದಿನಾರ್ ಇಸ್ಲಾಮಿಕ್ ಕಾಂಪ್ಲೆಕ್ಸ್ (ಎಂಐಸಿ) ನಡೆಸುತ್ತಿರುವ ಅಕಾಡೆಮಿ ಆಫ್ ಷರಿಯಾ ಮತ್ತು ಅಡ್ವಾನ್ಸ್‌ಡ್ ಸ್ಟಡೀಸ್ (ಎಎಸ್‌ಎಎಸ್) ಸಂಸ್ಥೆಯಲ್ಲಿ ಹಿಂದೂ ಪ್ರಾಧ್ಯಾಪಕರು ವಿದ್ಯಾರ್ಥಿಗಳಿಗೆ ಶ್ಲೋಕ, ಮಂತ್ರಗಳನ್ನು ಸಂಸ್ಕೃತದಲ್ಲಿ ಕಲಿಸುತ್ತಿದ್ದಾರೆ.
'ಇತರ ಧರ್ಮಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜ್ಞಾನ ಮತ್ತು ಅರಿವನ್ನು ಮೂಡಿಸುವ ಉದ್ದೇಶದಿಂದ ನಮ್ಮ ಸಂಸ್ಥೆಯಲ್ಲಿ ಸಂಸೃತ ಕಲಿಸುತ್ತಿದ್ದೇವೆ' ಎಂದು ಪ್ರಾಂಶುಪಾಲ ಓಣಂಪಿಲ್ಲಿ ಮುಹಮ್ಮದ್ ಫೈಝಿ ಹೇಳಿದ್ದಾರೆ.
'ವಿದ್ಯಾರ್ಥಿಗಳು ಇತರ ಧರ್ಮಗಳ ಪದ್ಧತಿ ಮತ್ತು ಆಚರಣೆಗಳನ್ನು ಅರಿತುಕೊಳ್ಳಲು ಸಂಸ್ಕೃತ ಕಲಿಕೆಯಿಂದ ಸಾಧ್ಯ' ಎಂದು ಶಂಕರ ತತ್ವಶಾಸ್ತ್ರವನ್ನು ಅಧ್ಯಯನ ಮಾಡಿರುವ ಮುಹಮ್ಮದ್ ಫೈಝಿ ಅಭಿಪ್ರಾಯಪಟ್ಟಿದ್ದಾರೆ.
ಭಗವದ್ಗೀತೆ, ಉಪನಿಷತ್ತು, ಮಹಾಭಾರತ, ರಾಮಾಯಣಗಳ ಪ್ರಮುಖ ಭಾಗಗಳನ್ನು 10ನೇ ತರಗತಿಯಲ್ಲಿ ಉತ್ತೀರ್ಣರಾದ ನಂತರ ಎಂಟು ವರ್ಷಗಳ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಸಂಸ್ಕೃತದಲ್ಲಿ ಕಲಿಸಲಾಗುತ್ತಿದೆ ಎಂದಿದ್ದಾರೆ.
ಸಂಸ್ಥೆಯು ಪ್ರಾಥಮಿಕವಾಗಿ ಷರಿಯಾ ಕಾಲೇಜಾಗಿದ್ದು, ಕ್ಯಾಲಿಕಟ್ ವಿಶ್ವವಿದ್ಯಾಲಯದ ಜೊತೆ ಸಂಯೋಜಿತವಾಗಿದೆ. ಪದವಿ ಕೋರ್ಸ್‌ನ ಕಲಾ ವಿಭಾಗದಲ್ಲಿ ಉರ್ದು ಮತ್ತು ಇಂಗ್ಲಿಷ್ ಭಾಷೆಗಳನ್ನು ಸಹ ಕಲಿಸಲಾಗುತ್ತಿದೆ ಎಂದಿದ್ದಾರೆ.
'ಆ ಶಿಕ್ಷಣ ಸಂಸ್ಥೆಗೆ ಯಾಕೆ ಹೋಗುತ್ತಿ ಎಂದು ಹಲವರು ನನ್ನನ್ನು ಕೇಳಿದ್ದರು. ಆಗ ನಾನು 'ಸಂಸ್ಕೃತ ಕಲಿಸಲು ಹೋಗುತ್ತಿದ್ದೇನೆ' ಎಂದು ಉತ್ತರಿಸಿದ್ದೆ. ಅದನ್ನು ಕೇಳಿ ನೀನು ಮಾಡುತ್ತಿರುವುದು ಉತ್ತಮ ಕೆಲಸ ಎಂದು ಪ್ರೋತ್ಸಾಹ ನೀಡಿದ್ದಾರೆ' ಎಂದು ಸಂಸ್ಥೆಯ ಪ್ರಾಧ್ಯಾಪಕ ಕೆ.ಕೆ. ಯತೀಂದ್ರನ್ ತಿಳಿಸಿದ್ದಾರೆ.