ನವದೆಹಲಿ: ಭಾರತೀಯ ರೈಲ್ವೆಯು ಶೀಘ್ರವೇ ಸಂಪೂರ್ಣವಾಗಿ ಕಾಗದರಹಿತವಾಗಿ ಕಾರ್ಯನಿರ್ವಹಿಸಲಿದೆ, ಸಚಿವಾಲಯಕ್ಕೆ ಸಂಬಂಧಿಸಿದ ಎಲ್ಲಾ ಕಡತಗಳನ್ನು ಡಿಜಿಟಲೀಕರಣಗೊಳಿಸಲಿದೆ.
ನವೆಂಬರ್ 1ರಿಂದಲೇ ರೈಲ್ವೆ ಮಂಡಳಿಯು ಎಲ್ಲ ವ್ಯವಹಾರ ಪ್ರಕ್ರಿಯೆ ಮತ್ತು ಕಡತಗಳನ್ನು ಡಿಜಿಟಲೀಕರಣಗೊಳಿಸಲು ಆರಂಭಿಸಿದೆ.'ನಿರ್ಧಾರ ಕೈಗೊಳ್ಳುವಿಕೆಯಲ್ಲಾಗುವ ವಿಳಂಬವನ್ನು ತಗ್ಗಿಸಲು ಮತ್ತು ಪರಿಣಾಮಕಾರಿ ಸೇವೆಯನ್ನು ಒದಗಿಸುವ ಉದ್ದೇಶದಿಂದ ರೈಲ್ವೆಯ ಸೇವೆಗಳನ್ನು ಕಾಗದರಹಿತವಾಗಿಸಲು ನಿರ್ಧರಿಸಲಾಗಿದೆ' ಎಂದು ಸಚಿವಾಲಯ ತಿಳಿಸಿದೆ.
'ಕೆಲಸದಲ್ಲಿ ಡಿಜಿಟಲ್ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳಲು ಎಲ್ಲ ಜನರಲ್ ಮ್ಯಾನೇಜರ್‌ಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ' ಎಂದು ರೈಲ್ವೆ ಮಂಡಳಿ ಮುಖ್ಯಸ್ಥ ವಿ.ಕೆ.ತ್ರಿಪಾಠಿ ತಿಳಿಸಿದ್ದಾರೆ.
'ವೇಗವಾಗಿ ಮತ್ತು ಪಾರದರ್ಶಕವಾಗಿ ಕೆಲಸ ಮಾಡುವ ಉದ್ದೇಶದಿಂದ ಸಚಿವಾಲಯದ ಕಾರ್ಯನಿರ್ವಹಣೆಯನ್ನು ಕಾಗದರಹಿತವಾಗಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕೆಲವೇ ಕೆಲವು ಸಂದರ್ಭದಲ್ಲಿ ಮಾತ್ರ ಕಾಗದದ ಕಡತಗಳಿಗೆ ಅವಕಾಶ ನೀಡಲಾಗುತ್ತದೆ' ಎಂದು ಹೇಳಿದ್ದಾರೆ.