ತಿರುವನಂತಪುರ: ಇತ್ತೀಚೆಗಷ್ಟೆ ಯುಎಇಯಿಂದ ವಾಪಾಸಾದ ತನ್ನ ಪುತ್ರನನ್ನು ಇಲ್ಲಿನ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ತಡೆ ಹಿಡಿದಿದ್ದಾರೆ. ಸೂಕ್ತ ವಿಧಾನ ಅನುಸರಿಸದೆ ಆತನ ಉಡುಪು ಕಳಚಿ ತಪಾಸಣೆ ನಡೆಸಿದ್ದಾರೆ ಎಂದು ರಾಜ್ಯ ಸಭಾ ಸದಸ್ಯ ಪಿ.ವಿ. ಅಬ್ದುಲ್ ವಹಾಬ್ ಆರೋಪಿಸಿದ್ದಾರೆ.
ಈ ಘಟನೆ ಬಗ್ಗೆ ತನಿಖೆ ನಡೆಸುವಂತೆ ಹಾಗೂ ಸೂಕ್ತ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೋರಿ ತಾನು ಕೇಂದ್ರ ಹಣಕಾಸು ಸಚಿವರಿಗೆ ದೂರು ನೀಡಿದ್ದೇನೆ ಎಂದು ಐಯುಎಂಎಲ್‌ನ ಸಂಸದ ಅಬ್ದುಲ್ ವಹಾಬ್ ಹೇಳಿದ್ದಾರೆ.
ಕರ್ತವ್ಯದಲ್ಲಿದ್ದ
ಕಸ್ಟಮ್ಸ್ ಅಧಿಕಾರಿಗಳು ಅಧಿಕಾರ ವ್ಯಾಪ್ತಿ ಮೀರಿ ತನ್ನ ಪುತ್ರನನ್ನು ಇಲ್ಲಿನ ಅನಂತಪುರಿ
ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಉಡುಪು ಕಳಚಿ ಶೋಧ ನಡೆಸಿದ್ದಾರೆ. ಎಕ್ಸ್
ರೇಗೂ ಒಳಪಡಿಸಿದ್ದಾರೆ. ಅನಂತರ ವಿಮಾನ ನಿಲ್ದಾಣಕ್ಕೆ ಹಿಂದೆ ಕರೆದುಕೊಂಡು ಬಂದಿದ್ದಾರೆ
ಎಂದು ಅಬ್ದುಲ್ ವಹಾಬ್ ಪ್ರತಿಪಾದಿಸಿದ್ದಾರೆ.
''ನನಗೆ ದೊರೆತ ಮಾಹಿತಿಯಂತೆ ಇಂತಹ
ತೀವ್ರ ಕ್ರಮಕ್ಕೆ ಮ್ಯಾಜಿಸ್ಟ್ರೇಟರ ಅನುಮೋದನೆ ಅಗತ್ಯ ಇರುತ್ತದೆ. ಗೌಪ್ಯತೆಯ ಹಕ್ಕು
ಉಲ್ಲಂಘನೆಯಾಗುವುದರಿಂದ ಕಸ್ಟಮ್ಸ್ ಅಧಿಕಾರಿಗಳು ತಮಗೆ ಬೇಕಾದಂತೆ ವರ್ತಿಸಲು
ಸಾಧ್ಯವಿಲ್ಲ. ಇದಕ್ಕಾಗಿ ಕಸ್ಟಮ್ಸ್ ನಿಯಮಗಳಲ್ಲಿ ಅದರದ್ದೇ ಆದ ವಿಧಾನಗಳಿವೆ'' ಎಂದು
ಅಬ್ದುಲ್ ವಹಾಬ್ ಹೇಳಿದ್ದಾರೆ.
ಈ ನಡುವೆ ಕೆಲವು ಸ್ಥಳೀಯ ಮಾಧ್ಯಮ ವರದಿಗಳು ಕಸ್ಟಮ್ಸ್ ಅಧಿಕಾರಿಗಳನ್ನು ಉಲ್ಲೇಖಿಸಿ, ಅಬ್ದುಲ್ ವಹಾಬ್ ಅವರ ಪುತ್ರನ ಉಡುಪು ಕಳಚಿ ತಪಾಸಣೆ ನಡೆಸಿಲ್ಲ. ಅವರ ಪುತ್ರನ ವಿರುದ್ಧ ಲುಕೌಟ್ ನೋಟಿಸ್ (ಎಲ್‌ಒಸಿ) ಜಾರಿಗೊಳಿಸಲಾಗಿತ್ತು ಎಂದಿದೆ.
''ವಿಮಾನ ನಿಲ್ದಾಣದಲ್ಲಿ ಹಾಜರಿದ್ದ
ಅಧಿಕಾರಿಗಳು ಕೇವಲ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವಿದೇಶದಿಂದ ಭಾರತಕ್ಕೆ
ಅಕ್ರಮವಾಗಿ ಚಿನ್ನ ಸಾಗಿಸುವ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತಪಾಸಣೆ
ತೀವ್ರಗೊಳಿಸಲಾಗಿದೆ''
- -ಕಸ್ಟಮ್ಸ್ ಮೂಲಗಳು