ಶಿಲ್ಲಾಂಗ್ : ಮೇಘಾಲಯ ಮತ್ತು ಅಸ್ಸಾಂ ರಾಜ್ಯಗಳಿಗೆ ಪ್ರತ್ಯೇಕ ಐಎಎಸ್, ಐಪಿಎಸ್ ಕೇಡರ್ ನೀಡುವ ಬೇಡಿಕೆಯನ್ನು ಪರಿಶೀಲಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಭರವಸೆ ನೀಡಿದ್ದಾರೆ ಎಂದು ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಕೆ.
ಸಂಗ್ಮಾ ಅವರು ಮಂಗಳವಾರ ಹೇಳಿದ್ದಾರೆ.
ಅಸ್ಸಾಂ ಸಂಪುಟ ಸಭೆ ವೇಳೆ ಈ ಕುರಿತು ಮಾತನಾಡಿದ ಅವರು, 'ಪ್ರತ್ಯೇಕ ಐಎಎಸ್ ಕೇಡರ್ ವಿಚಾರವನ್ನು ನಾನು ಹಲವಾರು ಬಾರಿ ಪ್ರಧಾನಿ ಮೋದಿ ಅವರ ಜೊತೆ ಚರ್ಚಿಸಿದ್ದೇನೆ. ಈ ಕುರಿತು ಪರಿಶೀಲಿಸುವುದಾಗಿ ಅವರು ಭರವಸೆ ನೀಡಿದ್ದಾರೆ' ಎಂದರು.
ಅಸ್ಸಾಂ ಮತ್ತು ಮೇಘಾಲಯದ ರಾಜ್ಯಗಳ ದೀರ್ಘಕಾಲೀನ ಹಿತಾಸಕ್ತಿ ಸಲುವಾಗಿ ಪ್ರತ್ಯೇಕ ಐಎಎಸ್ ಮತ್ತು ಐಪಿಎಸ್ ಕೇಡರ್‌ಗಳನ್ನು ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವುದನ್ನು ಮೇಘಾಲಯ ಸರ್ಕಾರ ಮುಂದುವರೆಸಲಿದೆ. ಇದಕ್ಕೆ ಸಂಬಂಧಿಸಿ ಈಗಾಗಲೇ ಹಲವಾರು ಪತ್ರಗಳನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ಕಳಿಸಲಾಗಿದೆ. ಸಕಾರಾತ್ಮಕ ಪ್ರತಿಕ್ರಿಯೆಯನ್ನು ಎದುರು ನೋಡಲಾಗುತ್ತಿದೆ ಎಂದು ಅವರು ಹೇಳಿದರು.