ಪುರುಷರು ಸಮಾಜದ ಒಂದು ಕಣ್ಣು ಇದ್ದಂತೆ. ಸಮಾಜ, ಸಮುದಾಯ, ಕುಟುಂಬಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುವ ವ್ಯಕ್ತಿ. ಪುರುಷರು ಹಗಲಿರುಳು ದುಡಿದು, ಬೆವರು ಸುರಿಸಿ, ಕುಟುಂಬವನ್ನು ಮೇಲಕೆತ್ತುವ ಕೆಲಸ ಮಾಡುತ್ತಾನೆ. ತಂದೆಯಾಗಿ, ಪತಿಯಾಗಿ, ಮಗನಾಗಿ ನಿಲ್ಲುವ ಪುರುಷರು ಪ್ರತಿಫಲ ಬಯಸದೆ ಜೀವಿಸುವವರು. ಹೀಗಾಗಿ ಎಲ್ಲರಿಗೂ ಪುರುಷರ ಬಗ್ಗೆ ಗೌರವವಿದೆ.
ಹೀಗಾಗಿಯೇ ಪುರುಷರಿಗೆ ಗೌರವ ನೀಡುವ ಉದ್ದೇಶದಿಂದ ಪುರುಷರ ದಿನಾಚರಣೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಚರಿಸಲಾಗುತ್ತದೆ. ಪುರುಷರ ಯೋಗಕ್ಷೇಮ ಮತ್ತು ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ದಿನವೂ ಹೌದು, ಜೊತೆಗೆ ಅವರು ಮಾಡುವ ಕೆಲಸಗಳಿಗಾಗಿ ಅವರನ್ನು ಗುರುತಿಸಿ ಗೌರವದ ಮೂಲಕ ಆಚರಣೆ ಮಾಡಲಾಗುತ್ತಿದೆ. ಹಾಗಾದರೆ ಅಂತರಾಷ್ಟ್ರೀಯ ಪುರುಷರ ದಿನವನ್ನು ಯಾವ ದಿನ ಆಚರಿಸಲಾಗುತ್ತದೆ? ಇದರ ಇತಿಹಾಸವೇನು? ಈ ಬಾರಿಯ ಥೀಮ್ ಏನು? ಆಚರಣೆ ಹೇಗೆ..? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.
ಯಾವ ದಿನ ಆಚರಣೆ ಮಾಡಲಾಗುತ್ತದೆ?
ನವೆಂಬರ್ 19 ರಂದು ಅಂತರರಾಷ್ಟ್ರೀಯ ಪುರುಷರ ದಿನವನ್ನು ವಿಶ್ವಾದ್ಯಂತ ಆಚರಿಸಲಾಗುತ್ತದೆ. ಪುರುಷರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಪುರುಷರ ಕಲ್ಯಾಣಕ್ಕಾಗಿ ಪ್ರಯತ್ನಗಳನ್ನು ಕೇಂದ್ರೀಕರಿಸುವ ಉದ್ದೇಶದಿಂದ ಅಂತಾರಾಷ್ಟ್ರೀಯ ಪುರುಷರ ದಿನವನ್ನು ಆಚರಿಸಲಾಗುತ್ತದೆ. ಅಲ್ಲದೇ ಪುರುಷರಲ್ಲಿ ಪಾಸಿಟಿವ್ ಆಗಿ ಬದಲಾವಣೆ ತರುವ ಉದ್ದೇಶದಿಂದ ವಿಶ್ವದಾದ್ಯಂತ ಪುರುಷರ ದಿನವನ್ನು ಆಚರಿಸಲಾಗುತ್ತದೆ.
ಈ ದಿನದ ಮಹತ್ವವೇನು?
ಈ ದಿನದಂದು ಪುರುಷರ ಯೋಗಕ್ಷೇಮ ಮತ್ತು ಆರೋಗ್ಯದ ಬಗ್ಗೆ ಹೆಚ್ಚಿನ ಚರ್ಚೆಗೆ ಅವಕಾಶ ಕೊಡಲಾಗುತ್ತದೆ. ಅವರ ಲೈಂಗಿಕ ಹೋರಾಟಗಳು ಮತ್ತು ಅವರು ಒಳಗಾಗುವ ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ ಮಾತನಾಡಲು ಈ ದಿನವನ್ನು ಮೀಸಲಿಡಲಾಗಿದೆ. ಅವರು ಎದುರಿಸುತ್ತಿರುವ ತಾರತಮ್ಯದ ಬಗ್ಗೆ ಮಾತನಾಡುವ ಮತ್ತು ಉತ್ತಮ ಲಿಂಗ ಸಂಬಂಧಗಳನ್ನು ರಚಿಸುವ ಭರವಸೆ ನೀಡುವ ದಿನವೂ ಹೌದು. ಈ ದಿನದ ಅಂತಿಮ ಗುರಿಯು ಮೂಲಭೂತ ಮಾನವೀಯ ಮೌಲ್ಯಗಳನ್ನು ಉತ್ತೇಜಿಸುವುದು ಮತ್ತು ಪುರುಷರ ಬಗ್ಗೆ ಅರಿವು ಮೂಡಿಸುವುದಾಗಿದೆ.
ಅಂತಾರಾಷ್ಟ್ರೀಯ ಪುರುಷರ ದಿನವು ಆರು ಸ್ತಂಭಗಳನ್ನು ಆಧರಿಸಿದ್ದು, ಮೊದಲ ಸ್ಥಂಭವು ಇದು ದಿನ ನಿತ್ಯ ಜೀವನದ ಕಾರ್ಮಿಕ ವರ್ಗದ ನಾಯಕರ ಸಕಾರಾತ್ಮಕ ಪುರುಷ ರೋಲ್ ಮಾಡೆಲ್‌ಗಳನ್ನು ನಿರ್ಮಿಸಲು ಕೇಂದ್ರೀಕರಿಸುತ್ತದೆ. ಎರಡನೇ ಸ್ಥಂಭವು ಸಮಾಜ, ಸಮುದಾಯ, ಕುಟುಂಬ, ಮದುವೆ, ಮಕ್ಕಳ ಆರೈಕೆ ಮತ್ತು ಪರಿಸರಕ್ಕೆ ಪುರುಷರ ಕೊಡುಗೆಗಳನ್ನು ಆಚರಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. ಮೂರನೆಯ ಸ್ತಂಭವು ಪುರುಷರ ಆರೋಗ್ಯ ಮತ್ತು ಸಾಮಾಜಿಕ, ಭಾವನಾತ್ಮಕ, ದೈಹಿಕ ಮತ್ತು ಆಧ್ಯಾತ್ಮಿಕ ಯೋಗಕ್ಷೇಮವನ್ನು ನೋಡಿಕೊಳ್ಳುತ್ತದೆ ಎಂದು ಭರವಸೆ ನೀಡುತ್ತದೆ.
ಇದು ಅನೇಕ ಕ್ಷೇತ್ರಗಳಲ್ಲಿ ಅವರು ಎದುರಿಸುತ್ತಿರುವ ತಾರತಮ್ಯವನ್ನು ಎತ್ತಿ ತೋರಿಸುತ್ತದೆ. ಅಂತರಾಷ್ಟ್ರೀಯ ಪುರುಷರ ದಿನವು ಲಿಂಗ ಸಂಬಂಧಗಳ ಬಗ್ಗೆ ಜಾಗೃತಿ ಮೂಡಿಸುತ್ತದೆ ಮತ್ತು ಲಿಂಗ ಸಮಾನತೆಯನ್ನು ಉತ್ತೇಜಿಸುವತ್ತ ಗಮನಹರಿಸುತ್ತದೆ. ಪ್ರತಿ ಜೀವಿಯು ತಮ್ಮ ಪೂರ್ಣ ಸಾಮರ್ಥ್ಯಕ್ಕೆ ಅಭಿವೃದ್ಧಿ ಹೊಂದುವಂತಹ ಉತ್ತಮ ಮತ್ತು ಸುರಕ್ಷಿತ ಜಗತ್ತನ್ನು ಸೃಷ್ಟಿಸಲು ಈ ದಿನ ಭರವಸೆ ನೀಡುತ್ತದೆ.
ಆಚರಣೆ ಹೇಗೆ?
ಪುರುಷರದ ದಿನವನ್ನು ವಿಶ್ವದಾದ್ಯಂತ ಆಚರಣೆ ಮಾಡಲಾಗುತ್ತದೆ. ಈ ದಿನದಂದು ಕಚೇರಿ, ಸಂಸ್ಥೆಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಪುರುಷರಿಗೆ ಮನರಂಜನಾ ಕಾರ್ಯಕ್ರಮ ಏರ್ಪಡಿಸಲಾಗುತ್ತದೆ. ಪುರುಷರಿಗೆ ವಿವಿಧ ಸೆಷನ್ ಗಳು ನಡೆಯುತ್ತದೆ. ಈ ದಿನದಂದು ಪುರುಷರ ಮಾನಸಿಕ ಆರೋಗ್ಯ, ಪುರುಷ ಆತ್ಮಹತ್ಯೆಯ ಪ್ರಭುತ್ವ, ಪುರುಷರ ಆರೋಗ್ಯವನ್ನು ಉತ್ತೇಜನೆ, ಲಿಂಗ ಸಂಬಂಧಗಳನ್ನು ಸುಧಾರಿಸುವ ಸಂಬಂಧ ಕಾರ್ಯಗಳನ್ನು ಮಾಡಲಾಗುತ್ತದೆ. ಇನ್ನು ಈ ದಿನದಂದು, ಪುರುಷರ ಆರೋಗ್ಯಕ್ಕೆ ಸಂಬಂಧಿಸಿದ ಕಾರಣಗಳಿಗೆ ದೇಣಿಗೆ ನೀಡಿ, ಅಥವಾ ಪುರುಷರ ಮಾನಸಿಕ ಆರೋಗ್ಯ ಮತ್ತು ದೈಹಿಕ ಕಾಯಿಲೆಗಳ ಬಗ್ಗೆ ಮಾತನಾಡುವ ಪೋಸ್ಟರ್ ಗಳನ್ನು ಮಾಡಿ, ಹಂಚಿಕೊಳ್ಳುವ ಮೂಲಕ ಪುರುಷರ ದಿನವನ್ನು ಆಚರಿಸಬಹುದು. ಶುಭಾಶಯಗಳನ್ನು ತಿಳಿಸಬಹುದು.
ಈ ಬಾರಿಯ ಥೀಮ್ ಏನು?
ಅಂತರಾಷ್ಟ್ರೀಯ ಪುರುಷರ ದಿನದ ಈ ವರ್ಷದ ಥೀಮ್ 'ಪುರುಷರು ಮತ್ತು ಹುಡುಗರಿಗೆ ಸಹಾಯ ಮಾಡುವುದು' ಎಂಬುವುದಾಗಿದೆ. ಪುರುಷರು ಮತ್ತು ಹುಡುಗರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಮಾತನಾಡುವ, ಸಮಸ್ಯೆಗಳನ್ನು ಚರ್ಚಿಸುವ ಮತ್ತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಮತ್ತು ಸಮ್ಮೇಳನಗಳನ್ನು ಆಯೋಜಿಸುವ ಮೂಲಕ ಈ ದಿನವನ್ನು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ.