ತಿರುವಲ್ಲ: ಮಂಡಲ ಪೂಜೆಗೆ ಕೆಲವೇ ಗಂಟೆಗಳು ಬಾಕಿ ಉಳಿದಿದ್ದು, ಶಬರಿಮಲೆಯಲ್ಲಿ ಸಿದ್ಧತೆಗಳು ಅಪೂರ್ಣತೆಯಲ್ಲೇ ಇದೆ ಎನ್ನಲಾಗಿದೆ.
ಎರಡು ವರ್ಷಗಳ ನಂತರ ಪೂರ್ಣಪ್ರಮಾಣದ ಶಬರಿಮಲೆ ಯಾತ್ರೆಯಾಗಿರುವುದರಿಂದ ಪ್ರತಿದಿನ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಆದರೆ ಸರ್ಕಾರವಾಗಲಿ, ದೇವಸ್ವಂ ಮಂಡಳಿಗಾಗಲಿ ಈ ಬಗ್ಗೆ ಪೂರ್ವ ತಯಾರಿ ಮಾಡಿಕೊಳ್ಳಲು ಸಾಧ್ಯವಾಗಿಲ್ಲ.
ದೇವಸ್ವಂ ಸಚಿವರು ಸೇರಿದಂತೆ ನಾಲ್ವರು ಸಚಿವರು ನಡೆಸಿದ ಪರಿಶೀಲನಾ ಸಭೆಗಳು ಪ್ರಹಸನವಾಗಿ ಮಾರ್ಪಟ್ಟಿವೆ. 10ರೊಳಗೆ ಪೂರ್ವಭಾವಿ ಸಿದ್ಧತೆಗಳು ಪೂರ್ಣಗೊಳ್ಳಲಿವೆ ಎಂದು ಹೇಳಲಾಗಿದ್ದರೂ ಮುಖ್ಯ ಮೂಲ ಶಿಬಿರವಾದ ನಿಲಕ್ಕಲ್‍ನಲ್ಲಿಯೂ ಕುಡಿಯುವ ನೀರು, ಪ್ರಾಥಮಿಕ ಚಿಕಿತ್ಸೆಗೆ ಸೌಲಭ್ಯಗಳಿಲ್ಲ. ಸಚಿವ ಮುಹಮ್ಮದ್ ರಿಯಾಝ್ ಪರಿಶೀಲನೆ ಹೆಸರಿನಲ್ಲಿ ‘ರೋಡ್ ಶೋ’ ನಡೆಸಿದ್ದು, ಒಂದೇ ಮಳೆಗೆ ಮತ್ತೆ ರಸ್ತೆಯಲ್ಲಿ ಗುಂಡಿಗಳು ಕಾಣಿಸಿಕೊಂಡಿವೆ. ಮುಖ್ಯರಸ್ತೆಯಾದ ಮನ್ನಾರಕುಳಂಜಿ-ಚಲಕ್ಕಯಂ ರಸ್ತೆಯಲ್ಲಿ ಹೊಂಡಗಳು ಬಿದ್ದಿದ್ದು, ರಸ್ತೆಗಳು ಜಲಾವೃತವಾಗಿವೆ.
ಪ್ರತಿದಿನ ಸುಮಾರು ಒಂದು ಲಕ್ಷ ಯಾತ್ರಾರ್ಥಿಗಳು ಆಗಮಿಸುವ ನಿರೀಕ್ಷೆಯಿದೆ. ಆದರೆ ನಿಲಕ್ಕಲ್ ನಲ್ಲಿ ಪಾರ್ಕಿಂಗ್ ಗ್ರೌಂಡ್ ಕೂಡ ಸಿದ್ಧವಾಗಿಲ್ಲ. ಕೊನೆಯ ಗಂಟೆಯಲ್ಲಿ ಟಾರಿಂಗ್ ಕೆಲಸ ನಡೆಯುತ್ತಿದೆ. ಮಳೆಯಿಂದಾಗಿ ನೆಲ ಕೆಸರುಮಯವಾಗಿದೆ. ಪಂಪಾದಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಮಹಾಪ್ರಳಯದ ನಂತರದ ಪರಿಸ್ಥಿತಿಯಿಂದ ಪಂಬಾತಟ ಹೆಚ್ಚು ಬದಲಾಗಿಲ್ಲ. ಅನೈರ್ಮಲ್ಯ ಮುಂದುವರಿದಿದೆ. ಸೇತುವೆ ಕಾಮಗಾರಿಯೂ ಪೂರ್ಣಗೊಂಡಿಲ್ಲ. ಇದು ಪೂರ್ಣಗೊಂಡರೆ ಮಾತ್ರ ಚೆರ್ಯಾನವಟ್ಟ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ತ್ಯಾಜ್ಯ ಸಾಗಣೆಗೆ ಅನುಕೂಲವಾಗಲಿದೆ.
ಸೇತುವೆ ಪೂರ್ಣಗೊಳ್ಳದಿದ್ದರೆ ಸಾಂಪ್ರದಾಯಿಕ ಮಾರ್ಗದ ಮೂಲಕ ಪಂಪೆಗೆ ತಲುಪುವ ಯಾತ್ರಾರ್ಥಿಗಳಿಗೂ ತೊಂದರೆಯಾಗಲಿದೆ. ದೇವಸ್ವಂ ಮಂಡಳಿಯು ರಸ್ತೆಯಲ್ಲಿ ಜಲ್ಲಿಕಲ್ಲು ಹಾಕುವ ಕಾಮಗಾರಿಯನ್ನು ಪೂರ್ಣಗೊಳಿಸುವ ಹಂತದಲ್ಲಿದೆ. ಜಲ್ಲಿಕಲ್ಲು ಹಾಕಿರುವುದು ಅವೈಜ್ಞಾನಿಕವಾಗಿದೆ ಎಂಬ ದೂರು ವ್ಯಾಪಕವಾಗಿದೆ. ನಿನ್ನೆ ಸುರಿದ ಭಾರಿ ಮಳೆಗೆ ಹಲವು ಚಪ್ಪಡಿಗಳು ನೆಲಸಮವಾಗಿವೆ. ಸನ್ನಿಧಾನದÀಲ್ಲಿ ಕಸ ಮತ್ತಿತರ ವಸ್ತುಗಳು ರಾಶಿ ಬಿದ್ದಿವೆ. ಯಾತ್ರೆ ಆರಂಭಗೊಂಡಿದ್ದರೂ ಶೌಚಾಲಯಗಳ ನಿರ್ವಹಣೆಗೆ ಟೆಂಡರ್ ಈವರೆಗೆ ಕರೆದಿಲ್ಲ.
ಶಬರಿಮಲೆ ಮಂಡಲ ಪೂಜೆಗೆ ದಿನಗಳಷ್ಟೇ ಬಾಕಿ: ಶಬರಿಮಲೆಯಲ್ಲಿ ಸಿದ್ದತೆಗಳಿಲ್ಲದೆ ಅವ್ಯವಸ್ಥೆ: ಮೂಲ ಸೌಕರ್ಯಗಳ ತೀವ್ರ ಕೊರತೆ
0
ನವೆಂಬರ್ 14, 2022