ಕೊಲ್ಲಂ: ಜನನಿಬಿಡ ರಸ್ತೆಯಲ್ಲಿ ಬೈಕ್ ಮೇಲೆಯೇ ಸ್ನಾನ ಮಾಡುತ್ತಾ, ಬೈಕ್ ಚಲಾಯಿಸಿ, ಹುಚ್ಚಾಟ ಮೆರೆದ ಸವಾರರಿಬ್ಬನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.
ಈ ಘಟನೆ ಕೊಲ್ಲಂನ ಸಸ್ಥಂಕೊಟ್ಟದಲ್ಲಿ ನಾಲ್ಕು ದಿನಗಳ ಹಿಂದೆ ರಾತ್ರಿ ಸಮಯದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಬಂಧಿತ ಬೈಕ್ ಸವಾರರನ್ನು ಅಜ್ಮಲ್ ಮತ್ತು ಬದುಸಾ ಎಂದು ಗುರುತಿಸಲಾಗಿದೆ. ಈ ಇಬ್ಬರು ಸಿನಿಮಾಪರಂಬು ಮೂಲದವರು. ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣ ದಾಖಲಿಸಲಾಗಿದೆ.
ಇಬ್ಬರೂ ಅರೆಬೆತ್ತಲೆಯಾಗಿ ಕೊಲ್ಲಂನ ಭರ್ಣಿಕ್ಕಾವು ಜಂಕ್ಷನ್ ಮೂಲಕ ಬೈಕ್ ಮೇಲೆ ಸೋಪ್ ಹಚ್ಚಿಕೊಂಡು ಸ್ನಾನ ಮಾಡುತ್ತಾ ಸಾಗುತ್ತಿದ್ದರು. ಈ ದೃಶ್ಯವನ್ನು ಸ್ಥಳೀಯರು ಮೊಬೈಲ್ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಇದು ಸಸ್ಥಂಕೊಟ್ಟ ಠಾಣಾ ಪೊಲೀಸರ ಗಮನಕ್ಕೆ ಬಂದಾಗ ಠಾಣೆಗೆ ಬರುವಂತೆ ಇಬ್ಬರಿಗೂ ಸೂಚನೆ ನೀಡಲಾಗಿತ್ತು. ಇಬ್ಬರು ನಿನ್ನೆ ಸಂಜೆ ಠಾಣೆಗೆ ಆಗಮಿಸಿದರು.
ಠಾಣೆಯಲ್ಲಿ ಸ್ಪಷ್ಟನೆ ನೀಡಿದ್ದ ಇಬ್ಬರೂ, ಆಟ ಮುಗಿಸಿ ವಾಪಸಾಗುತ್ತಿದ್ದ ವೇಳೆ ಮಳೆ ಬಂದಿತು. ಈ ವೇಳೆ ಫನ್ಗಾಗಿ ಆ ರೀತಿ ಮಾಡಿದೆವು ಎಂದು ತಿಳಿಸಿದ್ದಾರೆ. ಯುವಕರು ಡ್ರಗ್ಸ್ ಸೇವಿಸಿರಲಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಇಬ್ಬರಿಂದಲೂ ದಂಡ ವಸೂಲಿ ಮಾಡಿದ ಬಳಿಕ ಬಿಡುಗಡೆ ಮಾಡಿ ಕಳುಹಿಸಲಾಗಿದೆ.